Saturday, 5 May 2012

ಭ್ರಮೆ


ಅಬ್ಬಾ ತಡೆಯಲಾಗುತ್ತಿಲ್ಲ
ಈ ಎದೆಯೊಳಗಿನ ಉರಿ
ಎನುವ ಮಾತ ಕೇಳಿಸಿಕೊಂಡ
ನನ್ನ ಮಾಜಿ ಪ್ರೇಯಸಿ
ಅದು ತನ್ನಿಂದಾಗಿ ಎಂದುಕೊಂಡು
ಮುಖದಲ್ಲಿ ತೋರಿಸಿಯೇ ಬಿಟ್ಟಳು
ಒಂದು ಅಹಂಕಾರದ ನಗು;
ಈ ಉರಿಯ ಹಿಂದಿರುವ ಕಾರಣ
ಅವಳಿಗೇನು ಗೊತ್ತು,
ಗೆಳೆಯನ ಮದುವೆಯಲ್ಲಿ
ಗಟ್ಟಿಯಾಗಿ ಉಂಡ ಕಾರಣ
ನನ್ನನ್ನು ಕಾಡುತ್ತಿತ್ತು
ಹಾಳಾದ ಹುಳಿತೇಗು..

ಸರಿಸಮ


ಘಜ್ನಿ ಎಂಬ ಯವನ ದೊರೆ
ಸೋಮನಾಥ ದೇಗುಲವ
ಹದಿನೇಳು ಬಾರಿ
ಮಾಡಿದನಂತೆ ಲೂಟಿ;
ಪ್ರತಿಕ್ಷಣವೂ ನನ್ನ ಹೃದಯ
ದೇಗುಲದಿಂದ ನೆಮ್ಮದಿಯ
ಲೂಟಿ ಮಾಡುತ್ತಿರುವ ಅವಳಿಗೆ,
ಇವ ಆದಾನೇ ಸರಿಸಾಟಿ..??

ಪ್ರಶ್ನೆ..



ಕಡಲ ತೀರದ
ಮರಳ ರಾಶಿಯಲಿ
ಕುಳಿತು ನಿನ್ನನೇ
ನೋಡುತಲಿದ್ದೆ...
ಬಾನಿನಲಿ ನಿನ್ನ
ರಂಗಿನೆರಚಾಟವ 
ನನ್ನೀ ಕಂಗಳಲಿ 
ಸೆರೆಹಿಡಿಯುತಲಿದ್ದೆ
ಇಷ್ಟೊಂದು ಬಗೆಯ
ಬಣ್ಣಗಳ ನೀ ಹೇಗೆ
ಸೃಷ್ಠಿಸುವೆ ಎಂದು
ಮನವ ಕಾಡುತ್ತಿದ್ದ
ಪ್ರಶ್ನೆಯ ಕೇಳುವವನಿದ್ದೆ,
ಅಷ್ಟರಲೇ ಮುನಿಸಿಕೊಂಡು
ಕೆಂಪು ಕೆಂಪಾಗಿ
ನೀನೇಕೆ ಮುಳುಗಿ 
ಮರೆಯಾಗಿ ಹೋದೆ..?

Tuesday, 1 May 2012

ಬೆಳಗಾಗುತಿದೆ




ಆಗಸದ ಚೆಲುವನೆಲ್ಲಾ
ನುಂಗಿಹಾಕಿದ್ದ ಕತ್ತಲಿನ
ಕಪ್ಪಗಿನ ಬಣ್ಣವ
ರವಿಯ ಬೆಳಕಿನ ಕಿರಣವು
ಮೆಲ್ಲನೆ ಅಳಿಸಿ ಹಾಕುತಿದೆ...
ಇರುಳಿನ ಭೀಕರತೆಗೆ ಹೆದರಿ
ಮೌನದ ನೀರವತೆಯಲ್ಲಿ
ಕಳೆದು ಹೋಗಿದ್ದ
ಶಬ್ದಗಳನೆಲ್ಲಾ ಕರೆತರುವ
ಸಲುವಾಗಿ ಹಕ್ಕಿಯು ಹಾಡುತಿದೆ...
ಕತ್ತಲಿನ ನೆಪವೊಡ್ಡಿ
ಆಲಸ್ಯಕ್ಕೆ ಮೊರೆ ಹೋಗಿ
ನಿದಿರೆಯಲಿ ಮುಳುಗಿಹೋಗಿದ್ದ
ಜೀವಿಗಳಿಗೆಲ್ಲ ಎಚ್ಚರವಾಗುತಿದೆ..
ಮುಂಜಾನೆಯಲಿ ಬೇಗನೆ ಎದ್ದು
ಜಗವ ಬೆಳಗೋ ಕಾಯಕವ
ಶುರುಮಾಡಿದ ನೇಸರನ ಕಂಡು
ಮನುಜನಿಗೆ ಮೆಲ್ಲನೆ
ತನ್ನ ಕಾಯಕದ ನೆನಪಾಗುತಿದೆ..
ಭುವಿಗೆ ಬೆಳಗಾಗುತಿದೆ...






ರವಿವಾರ


ತನ್ನದೇ ದಿನ ಎಂದು
ಹೆಚ್ಚಿನ ಸಡಗರವಿಲ್ಲ,
ಉಳಿದ ದಿನಗಳಂತೆಯೇ
ಬೆಳಕಿನೊಡೆಯ ಬಂದನಲ್ಲ,
ಆದರೆ ಭುವಿಯ ಮೇಲಿನ
ಜನರಿಗೆ ಹಾಗಲ್ಲ...
ರವಿವಾರವೆಂದರೇನೋ ಖುಷಿ,
ದುಡಿತಕ್ಕೆ ರಜೆ ಇರೋ ನೆಪದಲ್ಲಿ
ತಡವಾಗಿ ಏಳಬಹುದಲ್ಲ...

ಅಸಾಧ್ಯ


ಕಣ್ಣಿನ ರೆಪ್ಪೆಯೆನುವ
ಕದವ ಗಟ್ಟಿಯಾಗಿ
ಮುಚ್ಚಿಕೊಂಡಿದ್ದೆನಲ್ಲ...
ಮನದೊಳಗಿನ
ನೆನಪಿನ ಬಿರುಗಾಳಿಗೆ
ತೆರೆಯದಿರಲೆಂದು
ಕಣ್ಣಿನ ಸುತ್ತ ಕಪ್ಪಗಿನ
ಬಟ್ಟೆಯ ಸುತ್ತಿಕೊಂಡಿದ್ದೆನಲ್ಲ...
ಅಷ್ಟಾಗಿಯು
ಮನಸಿಗೆ ಸಮಾಧಾನವಿಲ್ಲದೆ
ತನುವನಾವರಿಸುವಂತೆ
ದಪ್ಪಗಿನ ಕಂಬಳಿಯ
ಹೊದ್ದುಕೊಂಡಿದ್ದೆನಲ್ಲ..
ಇಷ್ಟೆಲ್ಲಾ ಅಡೆತಡೆಗಳಿದ್ದರೂ
ಅವಳ ಕನಸುಗಳನ್ನು
ತಡೆಹಿಡಿಯೋಕೆ ಮಾತ್ರ
ನನ್ನಿಂದ ಸಾಧ್ಯವಾಗಲೇ ಇಲ್ಲ...

ಸವಾಲು


ಕಾರ್ಮುಗಿಲುಗಳೊಂದಾಗಿ
ಸೂರ್ಯನನೆ ಮರೆಮಾಚಿರಲು
ಜಗವನಾವರಿಸಿತು
ರವಿಯಿರದ ಸಮಯದಂತಾ ಕತ್ತಲು,
ಮತ್ತೆ ತಮ್ಮೊಳಗೆ ತಾವೆ
ಕಚ್ಚಾಡಿ, ಸಿಡಿಲ ಸಿಡಿಸಲು
ಭುವಿಯನಾವರಿಸಿತು
ರವಿಯಿರುವ ಸಮಯದಂತಾ ಹೊನಲು,
ಅಬ್ಬಾ..! ನೀರಹನಿಗಳಿಂದಾದ
ಈ ಕಪ್ಪಗಿನ ಮೋಡಗಳು
ಭುವಿಯ ಬೆಳಗೋ ಭಾಸ್ಕರನಿಗೆ
ಹಾಕುತಿದೆಯೇ ಸವಾಲು..??