Saturday, 21 July 2012

ಕಳ್ಳತನ


















ಚೆಲುವಿನ ಮುಖದಲ್ಲಿ
ಬೆಲೆಬಾಳುವ
ಸುಂದರ ನಗುವಿದ್ದರೂ
ಅದನಲ್ಲೇ ಬಿಡಲು
ಬಯಸಿತೆನ್ನ ಮನ,
ಬದಲಾಗಿ ಹೊಂಚು
ಹಾಕುತಿದೆ ಕದಿಯಲು,
ಇಂತಾ ಅಸಂಖ್ಯ
ನಗುವ ಬಚ್ಚಿಟ್ಟುಕೊಂಡಿರುವ
ಅವಳ ಹೃದಯವೆನುವ
ತಿಜೋರಿಯನ್ನ.

Tuesday, 17 July 2012

ಹೀಗೊಂದು ಕೊಲೆ..


















ನೆತ್ತರು ಚಿಮ್ಮಿರಲಿಲ್ಲ..
ಚೀತ್ಕಾರದ ಸದ್ದೂ ಕೇಳಿಸಿರಲಿಲ್ಲ
ಸುತ್ತಮುತ್ತಲಿನ ಜನಕೆ
ಶವವೂ ಕಾಣಿಸುತ್ತಾ ಇಲ್ಲ
ಆದರೂ ಕೊಲೆಯೊಂದು ನಡೆದಿತ್ತು
ಕೊಲೆಯಾದ ರೀತಿಯೂ ವಿಚಿತ್ರ..
ಯಾವುದೇ ಹರಿತವಾದ
ಆಯುಧಗಳ ಬಳಕೆಯಾಗಿಲ್ಲ,
ಘೋರ ವಿಷಪ್ರಯೋಗವೂ ಆಗಿರಲಿಲ್ಲ
ಆದರೂ ಕೊಲೆಯೊಂದು ನಡೆದಿತ್ತು.
ಕೇಳಿದವರಾರು ನಂಬಲಾರರು
ಈ ರೀತಿ ಆಗುವುದುಂಟೇ.. ಎಂದಾರು..
ಯಾಕೆಂದರೆ ಕೊಲೆಯಾಗಿದ್ದು ನನ್ನ ಆತ್ಮ..
ನಾನು ನನ್ನವಳೆಂದುಕೊಂಡಿದ್ದಾಕೆ ಕೊಲೆಗಾರ್ತಿ
ಪ್ರೀತಿಯ ಬಲೆಯಲ್ಲಿ ಬೀಳಿಸಿ
ಮೋಸವೆನುವ ಮಾರಕಾಯುಧದಿಂದ
ಕರುಣೆ ತೋರದೆಯೇ ಕೊಂದು ಬಿಟ್ಟಳು..
ಈಗ ನನ್ನ ಆತ್ಮಕ್ಕೆ ಚೈತನ್ಯವಿಲ್ಲ
ಅದರ ಮನೆಯಂತಿದ್ದ ನನ್ನ ದೇಹವೇ
ಈಗ ಆ ಸತ್ತ ಆತ್ಮದ ಗೋರಿ..
ಹೀಗೊಂದು ಸಾವಿಗೆ ಅಳುವವರೂ ಯಾರಿಲ್ಲ
ಯಾಕೆಂದರೆ ಈ ಸಾವಿನರಿವು ನನ್ನವರಿಗಿಲ್ಲ..
ಹೇಳಹೊರಟೆನಂದರೂ ಕಾಡುವುವು
ಅವರ ಹಲವು ಪ್ರಶ್ನೆಗಳು.
ಕೊಲೆಯಾದುದೆಲ್ಲಿ..ಸತ್ತಿರುವ ದೇಹವೆಲ್ಲಿ..
ಸತ್ತದ್ದು ಹಾಗಿರಲಿ, ಸೋತು ಹೋದೇನು
ಜನರಿಗೀ ಸತ್ಯವ ಬಿಡಿಸಿ ತಿಳಿ ಹೇಳುವಲ್ಲಿ..
ಹಾಗಾಗಿ ಸುಮ್ಮನಿದ್ದೇನೆ..
ಸತ್ತ ಆತ್ಮದ ಸಾವಿಗೆ ನಾನೊಬ್ಬನೇ
ಅಳುತ್ತಾ, ಜಗದ ದೃಷ್ಟಿಯಲ್ಲಿ ಬದುಕಿದ್ದೇನೆ.

Sunday, 15 July 2012

ಪಶ್ಚಿಮದ ಪ್ರವಾಹ..


ಭರತ ಖಂಡದಲೀಗ ಹೊಸತೊಂದು ಹುಚ್ಚು ಪ್ರವಾಹ
ಪಶ್ಚಿಮದ ಸಂಸ್ಕೃತಿಯನೇ ಅನುಸರಿಸುವ ಹುಚ್ಚು ವ್ಯಾಮೋಹ.
ಯುವಜನತೆಗಂತೂ ಈ ಪ್ರವಾಹದಲೇ ಕೊಚ್ಚಿ ಹೋಗುವಾಸೆ,
ಜಗದ ಮೊದಲ ಭವ್ಯ ಸಂಸ್ಕೃತಿಯ ನುಚ್ಚುನೂರುಮಾಡುವಾಸೆ.

ಉಡುಗೆಯೂ ಅವರದೇ... ಅಡುಗೆಯೂ ಅವರದೇ...
ಆಡುವ ನುಡಿಯಂತೂ ಅವರದೇ ಆಗಿ ಹೋಗಿದೆ.
ಕಟ್ಟುಪಾಡಿನ ಆಚರಣೆಗಳೆಲ್ಲವೂ ಮುಢನಂಬಿಕೆಗಳಂತೆ,
ಹುಚ್ಚು ಮಾತನಾಡುತಿಹರು, ಆಚರಣೆಯ ತಿರುಳನರಿಯದೆ.

ಶತಮಾನದ ಬಿರುಗಾಳಿಗುರುಳದೇ ಇದು ನಿಂತಿರುವುದು
ನಮ್ಮತನದ ತಾಯಿಬೇರು ಬೀಡು ಬಿಟ್ಟಿರುವ ಆಳದಿಂದ.
ಅದನೇ ಕಿತ್ತೊಗೆದು ಬಿಡುವ ಹುಚ್ಚು ಕೆಲಸವ ಮಾಡುತಿಹರು
ತಪ್ಪು ಹಾದಿಯ ತುಳಿದಿರುವ ಜನ, ತಮ್ಮ ಅಜ್ಞಾನದ ಪರಮಾವಧಿಯಿಂದ

ಆಗಸದ ಸೂರ್ಯನನು ನೋಡಿ ಎಚ್ಚರಗೊಳ್ಳಿರಿ ಭಾರತೀಯರೇ..
ಪೂರ್ವದ ಹಾದಿಯಲಿರಲು ಮಾತ್ರ ಅವನ ಬೆಳಕು ಪ್ರಖರ.
ಪಶ್ಚಿಮದ ಹಾದಿಯನು ತುಳಿದಂತೆಲ್ಲಾ ಮಂದನಾಗುವನವನು
ಮತ್ತೂ ಮುಂದುವರಿದರೆ ಮುಳುಗಿಸಿ ಬಿಡುವುದವನನು ವಿನಾಶವೆಂಬ ಸಾಗರ.

ಸವಾಲು


----------
ಸದಾನಂದ ಗೌಡರ
ಒಂದೇ ಒಂದು ಸವಾಲು,
ಯಡ್ಡಿಯ ಬಾಯಿ ಮುಚ್ಚಿಸಲು;
ಕಿತ್ತೊಗೆದರೇನಂತೆ ನನ್ನ ಅಧಿಕಾರವ,
ತಾಕತ್ತಿದೆಯೇ..ನಿಮಗೆ
ನನ್ನ ನಗುವನಿಲ್ಲವಾಗಿಸಲು.

ಅಮಲು



ಇರುಳ ಸಂಚಿಗೆ
ಬಲಿಯಾಗಿ ನೇಸರನು
ಅಸ್ತಂಗತನಾಗಿರಲು,
ಜಗದ ಜನರ
ತಲೆಗೇರುತಿದೆ
ನಿದಿರೆಯೆಂಬ ಅಮಲು.

..

ದೇವ ಕಣ



ವಿಜ್ನಾನಿಗಳಿಗೆ
"ದೇವಕಣ"
ಸಿಕ್ಕಿ ಬಿಟ್ಟಿತಂತೆ,
ಅವರನ್ನುವಂತೆ
ಇದೇ ಸೃಷ್ಟಿಗೆ
ಮುಲ ಕಾರಣ.
ಅವರು ಅಜ್ನಾನಿಗಳೋ
ನಾನು ಅಜ್ನಾನಿಯೋ
ನನಗೇ ಗೊತ್ತಿಲ್ಲ
ನನಗನ್ನಿಸಿದಂತೆ
ಈ ಜಗದ ಅಣು ಅಣುವಿನಲ್ಲೂ
ಇದೆ ಈ ದೇವಕಣ

Tuesday, 3 July 2012

ವರ್ಷಧಾರೆ..

ಆಗಸದಿ ಕಣ್ಣಾಡಿಸಿದರೆ
ಸೂರ್ಯನ ಪತ್ತೆ ಇಲ್ಲ.
ಕಂಡದ್ದು ಬರಿಯ ಕಾರ್ಮುಗಿಲು.
ನೋಡುತ್ತಿದ್ದಂತೆಯೇ
ಮುತ್ತಿಕ್ಕತೊಡಗಿತೆನ್ನ ಮೊಗವ
ನೀರ ಸಣ್ಣ ಸಣ್ಣ ಹನಿಗಳು,
ತಂಪಿನನುಭವವ ಕೊಟ್ಟು
ಕಣ್ಣ ಮುಚ್ಚುವಂತೆ ಮಾಡಿತ್ತು.
ಒಂದರೊಳಗೊಂದು
ಬೆಸೆದುಕೊಂಡಿದ್ದ ಕರಗಳನು
ಬಿಚ್ಚುವಂತೆ ಮಾಡಿತ್ತು.
ಮನವು ಆನಂದದಲಿ ಅದೆಲ್ಲಿ
ತೇಲಿ ಹೋಗಿತ್ತೋ ನಾನರಿಯೆ.
ನನ್ನ ತನುವಿನ ಮೇಲೆ
ಸುರಿದ ಅಮೃತದ ವರ್ಷಧಾರೆಯು
ರವಿಯಿರದ ಬಾನನೂ
ಮೆಚ್ಚುವಂತೆ ಮಾಡಿತ್ತು.