Tuesday, 15 January 2013

ಹೊಸ ವರುಷ...????



ಅವರಿವರೆಲ್ಲಾ
ನಗು ನಗುತಾ
ಹೇಳಿದರು..
"ಹೊಸ ವರುಷದ
ಶುಭಾಶಯಗಳು.."
ನಾನೊಮ್ಮೆ ಸುತ್ತಲೂ
ಕಣ್ಣಾಡಿಸಿ ಕೇಳಿದೆ
ಹೊಸತೇನು..???
ಈಗ ಗೊಂದಲವು
ಅವರ ಮುಖದ
ನಗುವ ಕಸಿದುಬಿಟ್ಟಿದೆ.
ಉತ್ತರದ ಹುಡುಕಾಟ
ಇನ್ನೂ ಜಾರಿಯಲ್ಲಿದೆ.

ರಹಸ್ಯ..

ರವಿಯು ಆಗಸದ ಪೂರ್ತಿ
ತನ್ನವಳ ಹಗಲಿಡೀ ಹುಡುಕಾಡಿ
ಸಿಗದೆ ಹೋದಾಗ ನಿರಾಶನಾಗಿ
ಸಂಜೆಯಲಿ ಕಡಲ ಮರೆಗೋಡಿ
ಮನಸಾರೆ ಅತ್ತಿರಲೇಬೇಕು,
ಕತ್ತಲೆಡೆಯಲ್ಲಿ ಅತ್ತಿದ್ದು
ಲೋಕದ ಕಣ್ಣಿಗೆ ಕಾಣಿಸಲಿಲ್ಲವೆಂದು
ಮನದೊಳಗೆ ತನ್ನ ತಾ
ಸಂತೈಸಿಕೊಂಡಿದ್ದಿರಬೇಕು,
ಆದರೆ ಹಾಳು ಕಡಲ ನೀರು
ತನ್ನ ಬಳಿ ಬಂದವರಿಗೆಲ್ಲಾ
ಕಣ್ಣೀರ ರುಚಿಯನು ಉಣಬಡಿಸಿ
ರವಿಯ ಅಳುವಿನ
ರಹಸ್ಯವ ಬಯಲುಗೊಳಿಸಿತ್ತು

Wednesday, 2 January 2013

ಸತಾಯಿಸು

ಕಣ್ಣೀರ ಕಡಲ
ದಾಟುವುದಕಾಗಿ
ನಿರಂತರ ಈಜು
ಸಾಗುತಲೇ ಇದೆ;
ಕೈಗೆಟುಕದಷ್ಟು
ದೂರದಲಿ ನಿಂತ
ನಗುವಿನ ದಡವೀಗ
ನಗುತ ನನ್ನ
ಸತಾಯಿಸುತಿದೆ.

ಪತನ

ಪತನವಾಗಿದೆ
ನನ್ನ ಮುಖದ
ಸಾಮ್ರಾಜ್ಯದಲಿ
ನಗುವಿನಾಳಿಕೆ,
ಇದೀಗ ಶುರು
ಅಳುವಿನಾಡಳಿತ
ಇದೆಲ್ಲದಕೆ ಕಾರಣ
ನನ್ನಾಪ್ತರ ಅಗಲಿಕೆ

ಹೊಸ ವರುಷ...????

ಅವರಿವರೆಲ್ಲಾ
ನಗು ನಗುತಾ
ಹೇಳಿದರು..
"ಹೊಸ ವರುಷದ
ಶುಭಾಶಯಗಳು.."
ನಾನೊಮ್ಮೆ ಸುತ್ತಲೂ
ಕಣ್ಣಾಡಿಸಿ ಕೇಳಿದೆ
ಹೊಸತೇನು..???
ಈಗ ಗೊಂದಲವು
ಅವರ ಮುಖದ
ನಗುವ ಕಸಿದುಬಿಟ್ಟಿದೆ.
ಉತ್ತರದ ಹುಡುಕಾಟ
ಇನ್ನೂ ಜಾರಿಯಲ್ಲಿದೆ.

ಸಾವು ತಂದಿಟ್ಟ ನೋವು..

ನನ್ನಪ್ಪನ ನನ್ನಿಂದ ಕಸಿದುಕೊಂಡಾತನಿಗೆ ಕಂಗಳು ಕಾಣಿಸುವುದೇ ಇಲ್ಲ
ಕುಸಿದು ಕುಳಿತ ಕುಟುಂಬದ ಕಣ್ಣೀರ ಕೋಡಿಯೂ ಕಾಣದಾಯಿತಲ್ಲ..

ಚಿಕ್ಕಪ್ಪನ ಅಗಲಿಕೆಯ ಗಾಯ ಹಸಿಹಸಿಯಾಗಿರುವುದು ಕಾಣಿಸಲೇ ಇಲ್ಲ
ಆ ಗಾಯದ ಮೇಲೇ ಬರೆಯೆಳೆದು ಬಿಟ್ಟ, ಅದರಿಂದಾದ ನೋವು ಸಹಿಸಲಾಗುತ್ತಿಲ್ಲ

ನನಗಿರುವುದು ಬರಿಯ ಎರಡೇ ಕೈಗಳು ಎನುವುದು ಕಾಣಿಸಲೇ ಇಲ್ಲ
ಹಲವು ಕಂಗಳ ಅಳಿಸಿಬಿಟ್ಟ, ಅವೆಲ್ಲವನೂ ಒರೆಸುವುದು ನನಗೆ ಸಾಧ್ಯವಾಗುತ್ತಿಲ್ಲ

ನನ್ನ ಕಣ್ಣಿನಲೂ ಅಶ್ರು ಸಾಗರವಿರುವುದು ಅವನಿಗೆ ಕಾಣಿಸಲೇ ಇಲ್ಲ
ಅವನೆಲ್ಲಾ ಬಂಧನದಲ್ಲಿರಿಸೆಂದು ಬಿಟ್ಟ, ಕಾರಣ ನನ್ನವರ ನಾ ಸಂತೈಸಬೇಕಲ್ಲಾ.

ನನ್ನ ಕಾಲ ಮೇಲೆ ನಾ ನಿಂತಿದ್ದರೂ ಹೆಗಲಿನ್ನೂ ಹಸಿಯಾಗಿರುವುದು ಕಾಣಿಸಲೇ ಇಲ್ಲ
ಕುಟುಂಬದ ಹೊಣೆಯ ಮಣ ಭಾರವ ಹೊರಿಸಿಯೇ ಬಿಟ್ಟ, ಅದನೀಗ ಹೊರದೆ ನನಗೆ ಬೇರೆ ವಿಧಿಯಿಲ್ಲ

ನನ್ನಪ್ಪ ನಿನಗೂ ಬಲು ಅಚ್ಚುಮೆಚ್ಚೆಂದು ನಿನ್ನ ಬಳಿ ಕರೆಸಿಕೊಂಡೆ, ತಡೆಯುವುದು ನನ್ನಿಂದ ಸಾಧ್ಯವಿಲ್ಲ
ಅವರ ಸವಿನೆನಪುಗಳೆನೇ ನಮ್ಮುಸಿರನಾಗಿಸಿಬಿಡು ಹೇ ದೇವ, ಇದ ಬಿಟ್ಟು ನಿನ್ನ ಬೇರೇನೂ ನಾ ಕೇಳುವುದಿಲ್ಲ.

ಕೆಂಪು ವದನ



ಇರುಳು ಪೂರ್ತಿ
ವಸುಧೆಯ
ನೋಡಲಾಗದುದರ
ಹತಾಶೆಯನು
ಪ್ರತಿಬಿಂಬಿಸುವುದೇ
ಮುಂಜಾವಿನ
ನೇಸರನ ಈ
ಕೆಂಪು ವದನ.
ಕಂಡೊಡನೆ
ಹತಾಶೆಯ
ಬಣ್ಣವನು
ಕಿತ್ತೊಗೆದು
ಬಿಳಿ ಬಣ್ಣದ
ನಗುವ ಧರಿಸಿ
ಸೇರುವನು
ಆಗಸದ ಸದನ