Wednesday, 2 January 2013

ಸಾವು ತಂದಿಟ್ಟ ನೋವು..

ನನ್ನಪ್ಪನ ನನ್ನಿಂದ ಕಸಿದುಕೊಂಡಾತನಿಗೆ ಕಂಗಳು ಕಾಣಿಸುವುದೇ ಇಲ್ಲ
ಕುಸಿದು ಕುಳಿತ ಕುಟುಂಬದ ಕಣ್ಣೀರ ಕೋಡಿಯೂ ಕಾಣದಾಯಿತಲ್ಲ..

ಚಿಕ್ಕಪ್ಪನ ಅಗಲಿಕೆಯ ಗಾಯ ಹಸಿಹಸಿಯಾಗಿರುವುದು ಕಾಣಿಸಲೇ ಇಲ್ಲ
ಆ ಗಾಯದ ಮೇಲೇ ಬರೆಯೆಳೆದು ಬಿಟ್ಟ, ಅದರಿಂದಾದ ನೋವು ಸಹಿಸಲಾಗುತ್ತಿಲ್ಲ

ನನಗಿರುವುದು ಬರಿಯ ಎರಡೇ ಕೈಗಳು ಎನುವುದು ಕಾಣಿಸಲೇ ಇಲ್ಲ
ಹಲವು ಕಂಗಳ ಅಳಿಸಿಬಿಟ್ಟ, ಅವೆಲ್ಲವನೂ ಒರೆಸುವುದು ನನಗೆ ಸಾಧ್ಯವಾಗುತ್ತಿಲ್ಲ

ನನ್ನ ಕಣ್ಣಿನಲೂ ಅಶ್ರು ಸಾಗರವಿರುವುದು ಅವನಿಗೆ ಕಾಣಿಸಲೇ ಇಲ್ಲ
ಅವನೆಲ್ಲಾ ಬಂಧನದಲ್ಲಿರಿಸೆಂದು ಬಿಟ್ಟ, ಕಾರಣ ನನ್ನವರ ನಾ ಸಂತೈಸಬೇಕಲ್ಲಾ.

ನನ್ನ ಕಾಲ ಮೇಲೆ ನಾ ನಿಂತಿದ್ದರೂ ಹೆಗಲಿನ್ನೂ ಹಸಿಯಾಗಿರುವುದು ಕಾಣಿಸಲೇ ಇಲ್ಲ
ಕುಟುಂಬದ ಹೊಣೆಯ ಮಣ ಭಾರವ ಹೊರಿಸಿಯೇ ಬಿಟ್ಟ, ಅದನೀಗ ಹೊರದೆ ನನಗೆ ಬೇರೆ ವಿಧಿಯಿಲ್ಲ

ನನ್ನಪ್ಪ ನಿನಗೂ ಬಲು ಅಚ್ಚುಮೆಚ್ಚೆಂದು ನಿನ್ನ ಬಳಿ ಕರೆಸಿಕೊಂಡೆ, ತಡೆಯುವುದು ನನ್ನಿಂದ ಸಾಧ್ಯವಿಲ್ಲ
ಅವರ ಸವಿನೆನಪುಗಳೆನೇ ನಮ್ಮುಸಿರನಾಗಿಸಿಬಿಡು ಹೇ ದೇವ, ಇದ ಬಿಟ್ಟು ನಿನ್ನ ಬೇರೇನೂ ನಾ ಕೇಳುವುದಿಲ್ಲ.

No comments:

Post a Comment