Thursday, 24 January 2013

ನೆನಪಾದ ಭಾಷಣ...



ನೋಟೀಸು ಬಂದೊಡನೆ
ಶುರುವಾಗುತಿತ್ತು ತಯಾರಿ,
ಮನೆಯವರ, ನೆರೆಹೊರೆಯವರ
ಬಳಿ ಯಾಚನೆ, ನಾನಾ ಪರಿ,
ಅದೆಷ್ಟು ಉರು ಹೊಡೆದರೂ
ಮನದೊಳಗೆ ನಿಲ್ಲದ ಗಾಬರಿ...

ಭಾಷಣದ ದಿನದಂದೂ ಕೂಡ
ಮೊದಲು ಕರೆಯುವ ಹೆಸರು
ನನ್ನದಾಗದಿರಲಿ ಎನುವ ಪ್ರಾರ್ಥನೆ
ಹೆಸರ ಕರೆದೊಡನೆ
ಹೇಳಲಾಗದ ನಡುಕ, ಒಂದೇ ಸವನೆ

ಕೆಲವೊಮ್ಮೆ ಎದುರಿಗೆ..
ಮಗದೊಮ್ಮೆ ಹಿಂಬದಿಗೆ ಕೈಯ ಕಟ್ಟಿಕೊಂಡು,
ದೇಹವನು ಮುಂದಕ್ಕೊಮ್ಮೆ
ಹಿಂದಕ್ಕೊಮ್ಮೆ ಬಾಗಿಸಿಕೊಂಡು,
ದೃಷ್ಟಿಯನು ಮೇಲ್ಛಾವಣಿಯಲಿರಿಸಿಕೊಂಡು
ಒಪ್ಪಿಸುತಿದ್ದೆ ಸಭೆಗೆ ಭಾಷಣವ
ನನ್ನೊಳಗಿನ ಭಾರವ ಇಳಿಸಿಕೊಂಡು.

ಸದಾ ನನ್ನಿಂದ ಉತ್ತಮ ಭಾಷಣವ
ನನ್ನ ನೆಚ್ಚಿನ ಅಧ್ಯಾಪಕಿಯರ
ಕಂಗಳು ಬಯಸುತಿತ್ತು..
ಆದರೆ ಸಭೆಯ ನೋಡಿದಾಗಲೆಲ್ಲಾ
ಹಿಂಬದಿಯ ಸಾಲಲ್ಲಿರುವ
ಗೆಳೆಯರ ಮುಸಿ ಮುಸಿ ನಗು
ನನ್ನೊಳಗೂ ನಗುವ ತರಿಸುತಿತ್ತು.

ಕೊನೆಗೆ ಅದಾವ ರೀತಿ ಭಾಷಣ ಬಿಗಿದರೂ
ಹೆಚ್ಚಾಗಿ ಬಹುಮಾನ ನನ್ನ ಕೈ ಸೇರುತಿತ್ತು.
ಇಂದೇಕೋ ಇವೆಲ್ಲಾ ನೆನಪಾದೊಡನೆ
ಮನವು ಮತ್ತೆ ಸಂತಸವ ಪಟ್ಟಿತ್ತು.
ಮತ್ತೊಮ್ಮೆ ಮಂದಹಾಸವು
ನನ್ನ ತುಟಿಯ ಅಪ್ಪಿಕೊಂಡಿತ್ತು.

No comments:

Post a Comment