Wednesday, 20 November 2013

ರುಚಿ....



ನನ್ನೊಳಗಿನ ಸಾರವನೆಲ್ಲ
ಧಾರೆಯೆರೆದು ತಯಾರಿಸಿದ
ಹಣ್ಣಿನ ರುಚಿಯ ತೋರಿಸಿದ್ದೆ..
ರವಿಯು ಬಿಟ್ಟ ಉರಿ ಬೆಳಕಿನ
ಬಾಣದೇಟಿನ ನೋವ ನಾ ನುಂಗಿ
ನೆರಳೆನುವ ಹಿತವಾದ
ಸ್ಪರ್ಶದ ರುಚಿಯ ತೋರಿಸಿದ್ದೆ..
ಅತ್ತಿತ್ತ ಒಂದಡಿ ಇಡಲಾಗದಿದ್ದರೂ
ಇದ್ದಲ್ಲೇ ಅತ್ತಿತ್ತ ಮೆಲ್ಲಗೆ ಬಳುಕಾಡಿ
ದಣಿದ ನಿನ್ನ ತನುವಿಗೆ
ತಂಗಾಳಿಯ ರುಚಿ ತೋರಿಸಿದ್ದೆ
ಸ್ವಾರ್ಥವಿರದೆ ಇವೆಲ್ಲವನೂ
ನಾ ನಿನಗಿತ್ತರೂ, ಓ ಮನುಜ
ನೀನೇಕೆ ನನ್ನೊಡಲ ಹಸಿ ಹಸಿ
ನೆತ್ತರ ರುಚಿಯ ಬಯಸಿದೆ...?

ಚಿತ್ರಣ



ತವರ ತೊರೆದು
ವರನ ಮನೆಗೆ ಬಂದ
ವಧುವಿನಂತೆಯೇ
ಈ ನೀರ ಹನಿಗಳು,
ಎಂದೆನಗನಿಸಲು ಕಾರಣ;
ಬುವಿಯ ಮನೆಯಲಿ
ತಿಳಿಯಾಗಿ ನೆಲೆನಿಂತ
ಮಳೆಹನಿಗಳ
ಮುಖದಲಿ ಕಂಡ
ತವರಿನ ಚಿತ್ರಣ

ಬೆಳಕು...

ಪೂರ್ವದಿಂದುದಿಸಿ,
ಆಗಸದೆಲ್ಲೆಡೆ ಹರಡಿ
ಗಗನಗಾಮಿಯಾಗಿ
ಪಶ್ಚಿಮದ ವಾರಿಧಿಯೆಡೆ
ದಿನವಿಡೀ ಹರಿದು
ಕತ್ತಲಾದೊಡೆ
ಬತ್ತಿ ಹೋಗುವ
ದಿನಾರ್ಧದ ನದಿ..
ಈ ಬೆಳಕು...

ರೋಷಾಗ್ನಿ...



ಕಣ್ಣೊಳಗೆ ನೆತ್ತರಿರದ ಆಂಗ್ಲನವ,
ಮೈಕಲ್ ಓ ಡ್ವಯರ್,
ನೆತ್ತರ ಹೊಳೆಯನೇ ಹರಿಸಿದ
ಜಲಿಯನ್ ವಾಲಾ ಬಾಗಿನಲಿ,
ಅವನಾಳುಗಳು ಬಿಟ್ಟಿದ್ದ ಗುಂಡೊಂದು
ಅಂದು ಅಲ್ಲಿದ್ದ ಸರ್ದಾರನೊಬ್ಬನ
ಬಲ ತೋಳನೂ ಸೀಳಿತ್ತು.
ಅಂದೇ ಹೊತ್ತಿಸಿಬಿಟ್ಟಿದ್ದನೀತ
ಮನದೊಳಗೊಂದು ರೋಷಾಗ್ನಿಯ.
ವರುಷಗಳುರುಳಿದರೂ
ಆ ರೋಷಾಗ್ನಿಯ ಆರಲು ಬಿಡಲಿಲ್ಲ.
ಆ ಆಂಗ್ಲನವನೂರಿಗೆ ತೆರಳಿ
ಗಳಿಸಿಕೊಂಡ ಅವನ ಸಖ್ಯವ;
ಸಿಕ್ಕೊಡನೆ ಸುಟ್ಟು ಬಿಡಲಿಲ್ಲ.
ಎಂತು ಭಾರತೀಯರನು
ಸಭೆಯಲಿ ಆ ಪಾಪಿ ಸುಟ್ಟಿದ್ದನೋ
ಅಂತೆಯೇ ಸಭೆಯಲಿ ಸುಡುವಾಸೆ ಇವನಿಗೆ.
ದೈವವೊದಗಿಸಿತೊಮ್ಮೆ ಅಂತಹ ಅವಕಾಶವ
ಅದನೀತ ವ್ಯರ್ಥಗೊಳಿಸಲಿಲ್ಲ...
ಬರಿಯ ಬಿಳಿಯರು ನೆರೆದಿದ್ದ
ಸಭೆಯ ನಟ್ಟ ನಡುವೆಯೇ
ಕೈಯೊಳಗಿದ್ದ ಬಂದೂಕಿಗೆ
ತನ್ನೆದೆಯ ರೋಷಾಗ್ನಿಯ ಗುಂಡನು ತುಂಬಿಸಿ
ಸುಟ್ಟು ಬಿಟ್ಟ ಆ ಅಂಗ್ಲರವನ...
ಅವನುಸಿರು ನಿಂತೊಡನೆ
ಶಾಂತವಾಯಿತು ಈ "ಉಧಮ"ನ ರೋಷಾಗ್ನಿ..
ಇಪ್ಪತ್ತೊಂದು ವರ್ಷಗಳ ತರುವಾಯ,
ನಿಜಕೂ ಇವನೆಂಥಾ ವೀರ ಭಾರತೀಯ
ಅಭಿಮಾನದಿಂದಲಿ ಬೀಗುವಂತೆ
ಮಾಡಿ ಬಿಟ್ಟ ತಾಯಿ ಭಾರತಿಯ.
ಸರ್ದಾರ್ ಉಧಮ್ ಸಿಂಗ್ ಬಲಿದಾನದ ದಿನವಾದ ಇಂದು ಆ ಕ್ರಾಂತಿಯ ಕಿಡಿಗೊಂದು ನನ್ನ ನುಡಿ ನಮನ

ವಿಘ್ನ...

ಜಗ ಬೆಳಗಲು
ಹೊರಟ
ನೇಸರನ
ಶುಭಕಾರ್ಯಕೆ
ಕರಿಮೇಘರಾಜನ
ಅಡ್ದಗಾಲು

ಪರಮ ಗುರಿ

ಕರಿದಾದ ಮೋಡ ನಾನು,
ಛಿದ್ರ ಛಿದ್ರವಾದರೂ
ಪರವಾಗಿಲ್ಲ...
ಅವಳೆನುವ ಭುವಿಯ
ಸೇರುವುದೇ ನನ್ನ
ಪರಮ ಗುರಿಯಾಗಿತ್ತು,
ಆದರೆ ನನ್ನದೆಂಥಾ
ದೌರ್ಭಾಗ್ಯ...
ಚೂರಾದ ನನ್ನೀ ದೇಹದ
ಪ್ರತಿಯೊಂದು ಭಾಗವೂ
ಸಾಗರದ ನಟ್ಟ ನಡುವೆಯೇ
ಉದುರಿ ಬಿಟ್ಟಿತ್ತು.


ಜೈ ಜವಾನ

ಭರತ ಭೂಮಿಯ ವೀರ ಯೋಧರಿಗಿದೋ ನನ್ನ ನಮನ
ಮಾಡಿದರಂದು ಒಳಬಂದ ಪಾಕ್ ಯೋಧರ ನಿರ್ನಾಮ ಹವನ
ನೆರೆಯ ಧೂರ್ತ ನರಿಗಳ ಕುತಂತ್ರ ಯೋಜನೆಯ ಹನನ
ಭೂರಿ ಭೋಜನವನಿತ್ತು ಸಂತಸಪಡಿಸಿದರು ಯಮನ
ಕಳೆದುಕೊಂಡಿದ್ದ ಕಾರ್ಗಿಲಿನದಾಯಿತು ಭವ್ಯ ಪುನರಾಗಮನ
ದುರ್ವಿಧಿ.. ಆಳುತಿಹ ಭೂಪರು ಕೊಡುತಿಲ್ಲ ಈ ಸಾಧನೆಯೆಡೆ ಗಮನ
ಆದರೂ ಬೇಸರದಿ ಕುಗ್ಗದಿರು, ಕೆಚ್ಚೆದೆಯ ಓ ಜವಾನ
ನಿಮ್ಮೀ ಯಶೋಗಾಥೆಯ ಹಾಡುವೆವು ನಾವ್ ಪ್ರತಿದಿನ
ಈ ಹಾಡ ಹಾಡುತಲೇ ಕಳೆಯಲಿ ನಮ್ಮ ಜೀವನ

---ಕೆ.ಗುರುಪ್ರಸಾದ್
ವೀರಾವೇಶದಿಂದ ಹೋರಾಡಿ ಕಾರ್ಗಿಲನ್ನು ಮತ್ತೆ ತಂದಿತ್ತ ವೀರ ಯೋಧರಿಗಿದೋ ನನ್ನ ನುಡಿ ನಮನ