Wednesday, 20 November 2013

ರೋಷಾಗ್ನಿ...



ಕಣ್ಣೊಳಗೆ ನೆತ್ತರಿರದ ಆಂಗ್ಲನವ,
ಮೈಕಲ್ ಓ ಡ್ವಯರ್,
ನೆತ್ತರ ಹೊಳೆಯನೇ ಹರಿಸಿದ
ಜಲಿಯನ್ ವಾಲಾ ಬಾಗಿನಲಿ,
ಅವನಾಳುಗಳು ಬಿಟ್ಟಿದ್ದ ಗುಂಡೊಂದು
ಅಂದು ಅಲ್ಲಿದ್ದ ಸರ್ದಾರನೊಬ್ಬನ
ಬಲ ತೋಳನೂ ಸೀಳಿತ್ತು.
ಅಂದೇ ಹೊತ್ತಿಸಿಬಿಟ್ಟಿದ್ದನೀತ
ಮನದೊಳಗೊಂದು ರೋಷಾಗ್ನಿಯ.
ವರುಷಗಳುರುಳಿದರೂ
ಆ ರೋಷಾಗ್ನಿಯ ಆರಲು ಬಿಡಲಿಲ್ಲ.
ಆ ಆಂಗ್ಲನವನೂರಿಗೆ ತೆರಳಿ
ಗಳಿಸಿಕೊಂಡ ಅವನ ಸಖ್ಯವ;
ಸಿಕ್ಕೊಡನೆ ಸುಟ್ಟು ಬಿಡಲಿಲ್ಲ.
ಎಂತು ಭಾರತೀಯರನು
ಸಭೆಯಲಿ ಆ ಪಾಪಿ ಸುಟ್ಟಿದ್ದನೋ
ಅಂತೆಯೇ ಸಭೆಯಲಿ ಸುಡುವಾಸೆ ಇವನಿಗೆ.
ದೈವವೊದಗಿಸಿತೊಮ್ಮೆ ಅಂತಹ ಅವಕಾಶವ
ಅದನೀತ ವ್ಯರ್ಥಗೊಳಿಸಲಿಲ್ಲ...
ಬರಿಯ ಬಿಳಿಯರು ನೆರೆದಿದ್ದ
ಸಭೆಯ ನಟ್ಟ ನಡುವೆಯೇ
ಕೈಯೊಳಗಿದ್ದ ಬಂದೂಕಿಗೆ
ತನ್ನೆದೆಯ ರೋಷಾಗ್ನಿಯ ಗುಂಡನು ತುಂಬಿಸಿ
ಸುಟ್ಟು ಬಿಟ್ಟ ಆ ಅಂಗ್ಲರವನ...
ಅವನುಸಿರು ನಿಂತೊಡನೆ
ಶಾಂತವಾಯಿತು ಈ "ಉಧಮ"ನ ರೋಷಾಗ್ನಿ..
ಇಪ್ಪತ್ತೊಂದು ವರ್ಷಗಳ ತರುವಾಯ,
ನಿಜಕೂ ಇವನೆಂಥಾ ವೀರ ಭಾರತೀಯ
ಅಭಿಮಾನದಿಂದಲಿ ಬೀಗುವಂತೆ
ಮಾಡಿ ಬಿಟ್ಟ ತಾಯಿ ಭಾರತಿಯ.
ಸರ್ದಾರ್ ಉಧಮ್ ಸಿಂಗ್ ಬಲಿದಾನದ ದಿನವಾದ ಇಂದು ಆ ಕ್ರಾಂತಿಯ ಕಿಡಿಗೊಂದು ನನ್ನ ನುಡಿ ನಮನ

No comments:

Post a Comment