Friday, 27 May 2016

ಬಣ್ಣಗಳ ಹಬ್ಬ


ಹರುಷದಿಂದ
ನಮಗೆಲ್ಲಾ
ಆಚರಿಸಲು
ಬಣ್ಣಗಳ ಹಬ್ಬ
ಬರುವುದು
ಒಂದೇ ಬಾರಿ
ವರುಷದಲಿ;
ಆದರೆ ಆ
ನೇಸರ
ಒಬ್ಬಂಟಿಯಾದರೂ
ಕಡಲ ನೀರನ್ನೇ
ಓಕುಳಿಯನ್ನಾಗಿಸಿ
ಬಾನಿಗೆಲ್ಲಾ
ಬಣ್ಣಗಳ ಎರಚುತ್ತಾ
ಹೋಳಿಯ
ಸಡಗರವನಾಚರಿಸುವನು
ಪ್ರತಿ ದಿನದ
ಮುಂಜಾನೆಯಲಿ
ಮತ್ತು ಮುಸ್ಸಂಜೆಯಲಿ


ಇಬ್ಬನಿ


ನೇಸರನ
ಪ್ರೀತಿಯಲಿ
ನಿಜವಾಗಿಯೂ
ಜಾರಿ ಬಿದ್ದದ್ದು
ಬರಿಯ
ಇಬ್ಬನಿ

ಕರ್ಮ ಫಲ



ಬದುಕೇ ಹೀಗೆ....
ಇಲ್ಲಿ ಉಳುಮೆಯ ಕೆಲಸ
ಆಗಲೇ ಬೇಕು...
ಕರ್ಮದ ಬಿತ್ತನೆಗೆ
ಫಲ ಇದ್ದೇ ಇದೆ..
ಅದಾವುದ ಬೆಳೆಯುವೆವೋ
ಸಿಗುವುದದರದ್ದೇ ಫಲ...
ಭಗವಂತನ ಕೃಪಾದೃಷ್ಟಿಯ
ಮಳೆಯ ಬಗೆಗೆ ಸಂದೇಹವಿಲ್ಲ,
ತೊಂದರೆಯೆಂದರೆ ಬರಿಯ
ಪೂರ್ವ ಸುಕೃತದ
ಕೀಟಗಳದು ಅಥವಾ ಪಶುಪಕ್ಷಿಗಳದು
ಬೆಳೆಯ ತಿಂದೀತೋ... ?
ಅಥವಾ ಕಳೆಯ ತಿಂದು
ಬೆಳೆಯ ಬೆಳೆಸೀತೋ....?
ಎನ್ನುವುದರರಿವು ಯಾರಿಗೂ ಇಲ್ಲ.
ಕಾಯಬೇಕು....
ಫಲ ಸಿಗುವ ಮುನ್ನವೇ
ಉಸಿರು ನಿಂತರೂ
ಕಳವಳ ಪಡಬೇಕಾಗಿಲ್ಲ...
ಮತ್ತವು ಬರುವುದು
ಮುಂದಿನ ಜೀವನದುಳುಮೆಯ
ಬೆಳೆಗಳ ಹಾಳುಗೆಡವಲೋ...
ಅಥವಾ ಉಳಿಸಿ ಬೆಳೆಸಲೋ...?

ಭಯ



ಒಂಟಿತನದ ಸುಖಕಂಟಿ
ಕಾಲವ ಕಳೆಯುತಿದ್ದವನಿಗೀಗ
ತನ್ನರ್ಧವ ಧಾರೆಯೆರೆದು
ಅವಳರ್ಧವ ತಾ ಪಡೆದು
ಜಂಟಿಯಾಗುವುದೆಂದರೆ
ಅದೇನೋ ಹೇಳಲಾಗದ ಭಯ
ಗುಣಗಾನ....
ಹಾಳಾದ್ದು...
ಪಕ್ಷ ಪ್ರಚಾರಕ್ಕೆ
ಹೋಗಲೇ ಬಾರದಿತ್ತು.
.
.
.
.
.
.
.
.
.
ನಿನ್ನದೇ ಗುಣಗಾನ
ಮಾಡುವೆ
ಎಷ್ಟು ಕೊಡುತ್ತೀ...?
ಎಂದು ಕೇಳಿ ಬಿಟ್ಟೆ
ಅಭ್ಯಾಸ ಬಲದಿಂದ,
ನನ್ನವಳ ಬಳಿ.




ಹ್ಯಾಪಿ (???) ಹೋಳಿ..



" ಹ್ಯಾಪಿ "ಯಾಗಲೇ ಇಲ್ಲ
ಆಕೆ ಮುಟ್ಟಿ ಹಚ್ಚಿದರೂ
ನನ್ನ ಕೆನ್ನೆಗೆ ಚೆಲುವಿನ ಬಣ್ಣ ;
ಕಾರಣ; ಹಚ್ಚಿದವಳೇ
ನಗುತ್ತಾ ಹೇಳಿದ ಮಾತು
ಹ್ಯಾಪಿ ಹೋಳಿ " ಅಣ್ಣ "

Monday, 9 February 2015

ಭ್ರಮೆ.



ಬರಿಯ ಸಿಹಿ
ತಿಂಡಿಯಿಂದಾಗಿ
ಬರುವ ಹುಳಗಳಿಂದ
ಮಾತ್ರ ಹಲ್ಲುನೋವು
ಬರುವುದೆಂಬ
ಭ್ರಮೆಯಲಿದ್ದೆ..
.
.
.
.
ನನ್ನವಳು ಮಾಡಿದ
ಚಕ್ಕುಲಿಯ ತಿಂದಾಗಿನಿಂದ
ಆ ಭ್ರಮೆಯಿಂದ
ಹೊರಬರುತ್ತಿದ್ದೇನೆ...

ಒಂಟಿತನ



ಪದಗಳು ಕವನದಾ
ಹಿಡಿತಕ್ಕೆ ಸಿಗದಾದಾಗ
ಅದೇನೋ ವಿಚಿತ್ರವಾದ
ಒಂಟಿತನದ ಭಾವ
ನನ್ನನೀಗೀಗ ಕಾಡುತ್ತದೆ.
ಮೊದಲೆಲ್ಲಾ ಹೀಗಿರಲಿಲ್ಲ
ಪದಗಳಿಗೂ ನನಗೂ
ತೀರಾ ಪರಿಚಯದ ನಂಟು
ಅಂತೇನೂ ಇದ್ದಿರಲಿಲ್ಲ.
ಅದು ತೀರಾ ಆಕಸ್ಮಿಕದ ಭೇಟಿ,
ನಾವಿಬ್ಬರೂ ಕವನ ಕಟ್ಟೆಯಲಿ
ಜೊತೆ ಜೊತೆಗಿರಲು
ನೋಡುಗರ ಮೆಚ್ಚುಗೆಯ
ಮಾತುಗಳೇ ಅವುಗಳ
ಸನಿಹವ ಮತ್ತೆ ಮತ್ತೆ
ಬಯಸುವಂತೆ ಮಾಡಿದ್ದು.
ಅಂದು ಆ ಮೆಚ್ಚುಗೆಯ
ಮಾತುಗಳಿಗೆಲ್ಲಾ
ಕಿವಿಗೊಡಬಾರದಿತ್ತೇನೋ...?
ಹೀಗೆ ಒಂಟಿತನದ
ನೋವ ನುಂಗುವುದು
ನನಗಾಗ ದಕ್ಕುತ್ತಿರಲಿಲ್ಲವೇನೋ...?
ಹಾಗಿರುತ್ತಿತೋ ಏನೋ...?
ಹೀಗಿರುತಿತ್ತೋ ಏನೋ...?
ಎಂದು ಈಗ ಯೋಚಿಸಿ ಫಲವೇನು...?
ಗೀಚುವ ಗೀಳಿನ
ನೀರಿನೊಳಗಿಳಿದಾಗಿದೆ
ಆಗಾಗಾ ಒಂಟಿತನದ
ಚಳಿಯ ಸಹಿಸುವುದು
ಅನಿವಾರ್ಯವಾಗಿದೆ.