Wednesday, 30 November 2011




ಪ್ರತೀ ಇರುಳು
ಕಡಲಿನಾಳದಿಂದ 
ಅದ್ಯಾವ
ಮುತ್ತು ರತ್ನಗಳ 
ಕದ್ದು ತರುವೆ ?
ಕಣ್ಣು ಕೋರೈಸುವ 
ಆ ರತ್ನಗಳ
ಮೈ ತುಂಬಾ ಧರಿಸಿ
ಜಗಕೆ ನೀ 
ಬೆಳಕ ಕೊಡುವೆ.
ನಿಜಕೂ ಇದು
ನಿನಗೆ ತರವೇ?

Monday, 28 November 2011




ಕವಿ ಹೃದಯದ
ಗೆಳೆಯ-ಗೆಳತಿಯರ 
ಈ ಗುಂಪು
ಒಂದು ರೀತಿಯಲಿ
ಸರಿಸಮವು ದೇವಲೋಕದ
ಉದ್ಯಾನವನಕೆ;
ಕಣ್ಮನ ತಣಿಸುವ
ಪ್ರೇಮ ಕಾವ್ಯಗಳ ಸುಮವ
ಕೊಟ್ಟಿಹವು ಹಲವು
ಕವಿ ಗಿಡಗಳು,
ಇಲ್ಲಿನಾಕರ್ಷಣೆಯ
ಹೆಚ್ಚಿಸುವುದಕೆ;
ಜೀವನದ ಸಾರಾಮೃತವನೆ
ರುಚಿಯನಾಗಿಸಿಹ ಕಾವ್ಯಗಳ ಫಲವ
ಕೊಟ್ಟಿಹವು ಹಲವು
ಕವಿ ಮರಗಳು,
ಓದುಗನೆಂಬ ಪ್ರಕೃತಿ ಪ್ರೇಮಿಯ
ಹಸಿವನಿಲ್ಲದಂತಾಗಿಸುವುದಕೆ;
ಈ ಉದ್ಯಾನವನದೊಳಗೆ
ನನಗೊಂದು ನೆಲೆ
ಕೊಟ್ಟಿರುವರೆನುವುದೇ
ನನ್ನ ಪಾಲಿನ ಹೆಗ್ಗಳಿಕೆ;
ಫಲ ಪುಷ್ಪಗಳ ನೀಡದಿದ್ದರೇನಂತೆ?
ನಾನಾಗಿರುವೆ ಈ ತೋಟದ ನೆಲಕೆ,
ಹಸಿರನೀವ ಬರಿಯ ಹುಲ್ಲು ಗರಿಕೆ.

Saturday, 26 November 2011







ವರುಷ ಮೂರು ಕಳೆದು ಹೋಗಿದೆ,
ನೆನಪು ಮನದೊಳಗಿಂದೂ ಅಚ್ಚಳಿಯದುಳಿದಿದೆ,
ಬತ್ತದಾ ಕಣ್ಣೀರಿಂದೂ ಉಕ್ಕಿ ಹರಿದಿದೆ,
ಆದರೇಕೋ ಕುದಿಯಬೇಕಾಗಿದ್ದ ನೆತ್ತರು ಮಾತ್ರ ಹೆಪ್ಪುಗಟ್ಟಿದೆ.

ನಮ್ಮ ರಕ್ಷಣೆಗೆ ಸಲುವಾಗಿ ತಮ್ಮ ಪ್ರಾಣವನೆ ಮುಡಿಪಾಗಿಟ್ಟರವರು
ನಮ್ಮ ಹಿಂದೆ ಸರಿಸಿ ಬರುತ್ತಿದ್ದ ಗುಂಡಿಗೆ ತಮ್ಮ ಗುಂಡಿಗೆಯನೆ ಇತ್ತರವರು
ನಮ್ಮ ರಕ್ತ ತೊಟ್ಟಿಕ್ಕಬಾರದೆಂದು, ತಮ್ಮ ರಕ್ತವನೆ ಹರಿಸಿದರು ಅವರು
ಆದರೇಕೋ ಅವರ ಬಲಿದಾನವನೆ ಮರೆತಿಹರು, ನಮ್ಮನಾಳುವವರು.

ಪಾತಕಿಯ ಉಪಚರಿಸಲು ಇಲ್ಲಿಹುದು ಕೋಟಿ ಕೋಟಿ ಹಣವು
ಕಾಣದಿವರಿಗೆ ಪ್ರಾಣ ತೆತ್ತೆ ಸಂಸಾರ ಸಹಿಸುತಿಹ ನೋವು
ಬನ್ನಿ ಕೈ ಜೋಡಿಸೋಣ ಇವರುಗಳ ಕಣ್ಣೀರೊರೆಸಲು ನಾವು
ಕೊಡಿಸುವುದಕೆ ಹೋರಾಡೋಣ, ಕಸಬ್ ಎಂಬ ಉಗ್ರನಿಗೆ ಸಾವು.

ಅಪ್ರತಿಮ ವೀರರ ನಾಡಲಿ ಹುಟ್ಟಿಹ ನಾವೇಕೆ ಸತ್ತಂತೆ ಮಲಗಿಹೆವು?
ನಮ್ಮ ಹೊತ್ತಿರುವ ಮಾತೆಯ ಕರುಳ ಬಗೆದವಗೆ ಅತಿಥಿಯ ಸ್ಥಾನವನೇಕೆ ಕೊಟ್ಟಿಹೆವು?
ಜಗವೆ ನಗುತ್ತಿದ್ದರೂ ನಾವೇಕೆ ಕೈಯ ಕಟ್ಟಿ ಶಂಡರಂತೆ ಕುಳಿತಿಹೆವು?
ತೊಡೆ ತಟ್ಟಿ ನಿಲ್ಲೋಣ, ಜಗಕೆ ಸಾರಿ ಹೇಳೋಣ
ಇಂತಹಾ ದಿನವ ಮತ್ತೆಂದು ಬರಲು ಬಿಡೆವು, ಮತ್ತೆಂದು ಬರಲು ಬಿಡೆವು.

Thursday, 24 November 2011

ಭಾರತದ 
ಜನರಿಗೆಲ್ಲಾ
ಈಗ 
ಡೈಲಿ "worry"
ವಿಷಯ
ಯಾವಾಗಾಗುತ್ತೋ
ನಮ್ಮ ಐಶು
ಡೆಲಿವರಿ


ಬಾ ರವಿಯೆ




ನಿನ್ನೆ ರಾತ್ರಿ ಕಂಡ
ಸಾಧಕನಾಗುವ
ಕನಸೆನುವ ಕೂಸಿಗೆ
ಜೀವ ನೀಡಲು ಸಾಧ್ಯ,
ಬರಿಯ ನಿನ್ನ ಬೆಳ್ಳಿಯ ಕಿರಣಕೆ.
ನನ್ನ ಪರಿಶ್ರಮದ
ಪ್ರೇಮಧಾರೆಯೂ ಬೇಕು,
ಈ ಕಂದನ ಬೆಳವಣಿಗೆಗೆ;
ಬೆಳೆಸುವಾಸೆ ಓ ರವಿಯೆ,
ಅದಕಾಗಿ ಜೀವ ನೀಡಲು ಬಾ
ನನ್ನ ಮುದ್ದು ಕನಸಿಗೆ,
ವಿದಾಯವ ಹೇಳಿ ಆ ಶರಧಿಗೆ. 

Wednesday, 23 November 2011

ಚಿತ್ರ ಕವನ



ಮೋಡವೆನುವ
ಸಾಗರದೊಳಗಿಂದ,
ಹುಡುಕಿ ತಂದ,
ಅಪರೂಪದ ನೀರಹನಿಗಳ
ಮುತ್ತುಗಳಿಂದ
ಮನೆಯ ಸಿಂಗರಿಸಿರುವೆ;
ಈ ಚೆಲುವಿಗೆ 
ಮಾರು ಹೋಗಿ
ನನ್ನ ಮನೆಗೋಡಿ ಬರುವ
ಅತಿಥಿಗಳನೇ ಬೇಟೆಯಾಡಿ
ಹಸಿದ ಹೊಟ್ಟೆಯನು
ತಣಿಸಬೇಕೆಂದುಕೊಂಡಿರುವೆ.

Monday, 21 November 2011

ಏಕಲವ್ಯ


ಕವಿ ಎಂದೆನಿಸಿಕೊಂಡವನು
ಒಂದು ರೀತಿಯಲಿ
ಏಕಲವ್ಯನಂತೆ;
ಗುರುವಿರದೆ ಕಲಿತ
ವಿದ್ಯೆಯೇ ಕವನ ರಚನೆ;
ಸಾಹಿತ್ಯ ಕ್ಷೇತ್ರದಲಿ
ದ್ರೋಣರಂತಿರುವವರ
ರಚನೆಗಳ ಅಧ್ಯಯನವೇ
ಈ ಕವಿಗಳಿಗೆ ಕಲಿಕೆ;
ಈ ಕಲಿಕೆಯಿಂದಾಗಿ
ಸಿಗುವ ಅನುಭವವೇ
ಇವರುಗಳ ಸ್ವಂತ
ರಚನೆಗೆ ವೇದಿಕೆ.