Saturday 26 November, 2011







ವರುಷ ಮೂರು ಕಳೆದು ಹೋಗಿದೆ,
ನೆನಪು ಮನದೊಳಗಿಂದೂ ಅಚ್ಚಳಿಯದುಳಿದಿದೆ,
ಬತ್ತದಾ ಕಣ್ಣೀರಿಂದೂ ಉಕ್ಕಿ ಹರಿದಿದೆ,
ಆದರೇಕೋ ಕುದಿಯಬೇಕಾಗಿದ್ದ ನೆತ್ತರು ಮಾತ್ರ ಹೆಪ್ಪುಗಟ್ಟಿದೆ.

ನಮ್ಮ ರಕ್ಷಣೆಗೆ ಸಲುವಾಗಿ ತಮ್ಮ ಪ್ರಾಣವನೆ ಮುಡಿಪಾಗಿಟ್ಟರವರು
ನಮ್ಮ ಹಿಂದೆ ಸರಿಸಿ ಬರುತ್ತಿದ್ದ ಗುಂಡಿಗೆ ತಮ್ಮ ಗುಂಡಿಗೆಯನೆ ಇತ್ತರವರು
ನಮ್ಮ ರಕ್ತ ತೊಟ್ಟಿಕ್ಕಬಾರದೆಂದು, ತಮ್ಮ ರಕ್ತವನೆ ಹರಿಸಿದರು ಅವರು
ಆದರೇಕೋ ಅವರ ಬಲಿದಾನವನೆ ಮರೆತಿಹರು, ನಮ್ಮನಾಳುವವರು.

ಪಾತಕಿಯ ಉಪಚರಿಸಲು ಇಲ್ಲಿಹುದು ಕೋಟಿ ಕೋಟಿ ಹಣವು
ಕಾಣದಿವರಿಗೆ ಪ್ರಾಣ ತೆತ್ತೆ ಸಂಸಾರ ಸಹಿಸುತಿಹ ನೋವು
ಬನ್ನಿ ಕೈ ಜೋಡಿಸೋಣ ಇವರುಗಳ ಕಣ್ಣೀರೊರೆಸಲು ನಾವು
ಕೊಡಿಸುವುದಕೆ ಹೋರಾಡೋಣ, ಕಸಬ್ ಎಂಬ ಉಗ್ರನಿಗೆ ಸಾವು.

ಅಪ್ರತಿಮ ವೀರರ ನಾಡಲಿ ಹುಟ್ಟಿಹ ನಾವೇಕೆ ಸತ್ತಂತೆ ಮಲಗಿಹೆವು?
ನಮ್ಮ ಹೊತ್ತಿರುವ ಮಾತೆಯ ಕರುಳ ಬಗೆದವಗೆ ಅತಿಥಿಯ ಸ್ಥಾನವನೇಕೆ ಕೊಟ್ಟಿಹೆವು?
ಜಗವೆ ನಗುತ್ತಿದ್ದರೂ ನಾವೇಕೆ ಕೈಯ ಕಟ್ಟಿ ಶಂಡರಂತೆ ಕುಳಿತಿಹೆವು?
ತೊಡೆ ತಟ್ಟಿ ನಿಲ್ಲೋಣ, ಜಗಕೆ ಸಾರಿ ಹೇಳೋಣ
ಇಂತಹಾ ದಿನವ ಮತ್ತೆಂದು ಬರಲು ಬಿಡೆವು, ಮತ್ತೆಂದು ಬರಲು ಬಿಡೆವು.

No comments:

Post a Comment