ಪಯಣಿಸುತಿರಲೊಮ್ಮೆ,
ಅರ್ಧ ತೆರೆದಿದ್ದ
ಬಸ್ಸಿನ ಕಿಟಕಿಗೆ
ತಲೆಯೊರಗಿಸಿ
ಕಣ್ ಮುಚ್ಚಿರಲು,
ಜೋರಾಗಿ ಬೀಸುತ್ತಿದ್ದ
ತಂಗಾಳಿಯು
ಮನವ ಮುದಗೊಳಿಸಿರಲು,
ತಂಪಾದ ಹನಿಯೊಂದು
ಬಂದು ನನ್ನ ಕೆನ್ನೆಯಲಿ
ಆಶ್ರಯವ ಪಡೆಯಿತು.
ಕ್ಷಣಾರ್ಧದಲಿ ಮನದ
ಭಾವನೆಯು ಕಲ್ಪಿಸತೊಡಗಿತು,
ನನ್ನವಳೇ ಹನಿಯಾಗಿ ಬಂದು
ಸಿಹಿ ಮುತ್ತೊಂದ ಕೊಟ್ಟಳೇ?
ಆ ಹನಿಯೊಳಗೆ
ಅವಳ ಕಾಣಬಯಸಿ,
ಬೆರಳ ತುದಿಯಲೊರಸಿ
ನೋಡಿದರೆ,
ಅದು ಹಸಿರು ಮಿಶ್ರಿತ
ಕೆಂಪು ಬಣ್ಣದ ಹನಿಯಾಗಿತ್ತು.
ಮನವು ಮತ್ತೆ ಯೋಚಿಸಿತು,
ಕೋಪಗೊಂಡಿರುವಳೇ ಅವಳು?
ಈ ಎಲ್ಲಾ ಭಾವನೆಗಳ
ನುಚ್ಚುನೂರಾಗುವಂತೆ ಮಾಡಿದ್ದು,
ನನ್ನೊಡಲನು ಕೋಪದಲಿ
ಕೆಂಪಾಗುವಂತೆ ಮಾಡಿದ್ದು,
ಕಹಿ ಸತ್ಯದರಿವು.
ನಿಜ ರೂಪವ ತೋರಿದಾಗ
ಈ ಕೆಂಪು ಹನಿಗಳು
ಮನದೊಳಗೆ ಮೂಡಿದ್ದು
ಸಾವಿರಾರು ಬೈಗಳು.
ನಾನೆನೆಸಿಕೊಂಡಿದ್ದ
ಅವಳೆನುವ ಹನಿಗಳು;
ವಾಸ್ತವದಲಿ ಆಗಿತ್ತು
ನನ್ನೆದುರಲ್ಲಿ ಕುಳಿತ್ತಿದ್ದವನ
ಪಾನಿನುಗುಳು.
No comments:
Post a Comment