Tuesday, 31 January 2012




ನಿನ್ನ ಪತ್ರವೇನೋ ಬಂದು ಸೇರಿತು ಇನಿಯಾ

ಆದರೆ ನೀನೇ ಬಂದಂತಾಗಲಿಲ್ಲ

ಪತ್ರದಲಿನ ಪದಗಳೆಲ್ಲವೂ ಸ್ಪರ್ಶಿಸಿದವೆನ್ನ

ಆದರವು ನಿನ್ನಂತೆ ನನ್ನ ಮುದ್ದಿಸಲಿಲ್ಲ.

ಸೂರ್ಯ ಮತ್ತು ಭುವಿಯು 
ಒಂದಾಗೋ ಹೊತ್ತು
ಪ್ರಿಯೆ ನಾ ಕೊಡಲೇ 
ನಿನ್ನ ಹಣೆಗೊಂದು ಮುತ್ತು.

Sunday, 29 January 2012


ಮುಂಜಾವಿನಿಂದ ಮುಸ್ಸಂಜೆಯವರೆಗೆ
ಬಣ್ಣ ಬಣ್ಣದ ತೊಡುಗೆಗಳ ತೊಟ್ಟು
ನೀಲಿ ನೀಲಿ ಪರದೆಯ ಮುಂದೆ
ತನ್ನ ಪಾತ್ರವನಾಡಿ ಬಳಲಿದನು ನೇಸರ.
ಇದುವೇ ಸರಿಯಾದ ಸಮಯವೆಂದು
ತಾರೆಗಳ ತಂಡವನೇ ಕರೆತಂದು
ಕಪ್ಪು ಬಣ್ಣದ ಪರದೆಯನು ಎಳೆದು
ಆಗಸದ ರಂಗಮಂಟಪವನಾವರಿಸಿದನು ಚಂದಿರ

Saturday, 28 January 2012



"ಪ್ರೀತಿಸುವ ನಾಟಕವನಾಡಿ


ಅವಳೆನ್ನ ಮರೆತಳೇ.."


ಈ ಮಾತುಗಳ


ನಾನಂತೂ ಮನದೊಳಗೇ


ಮೆಲುಕು ಹಾಕಿದ್ದೆ


ಶಬ್ದಗಳ ರೋಪ ನೀಡದೆ


ಕಣ್ಣೀರ ಕೊಳದಲ್ಲಿ


ಜಲ ಸಮಾಧಿಮಾಡಿದ್ದೆ


ಅದು ಹೇಗೆ ಅರ್ಥವಾಯಿತೋ


ನನಗಂತೂ ಗೊತ್ತಿಲ್ಲ


ಆ ಕ್ಷಣವೇ ಗೋಡೆಯ


ಮೇಲಿನ ಹಲ್ಲಿ ಲೊಚಗೊಟ್ಟಿದ್ದೇಕೆ..?



ಕರಿದಾದ ಕತ್ತಲಿಗೆ ಮುಪ್ಪಡರಿತೇ...
ತಾರೆಗಳ ತೋಟವದು ಬರಡಾಯಿತೇ..
ನೀರವ ಮೌನವೂ ಮರೆಯಾಯಿತೇ..
ಅದ್ಯಾರು ಉರಿಸಿದರೋ ನಾ ಕಾಣೆ
ಮುಡಣದ(moodana)ಮುಲೆಯಲಿ(mooleyali) ರವಿಯೆನುವ ಹಣತೆ
ಕಡಲ ನೀರಿನೆಣ್ಣೆಯ ಬಳಸಿ ಅದು ಪ್ರಜ್ವಲಿಸತೊಡಗಿತೇ..

Thursday, 26 January 2012

ಜಾಣೆ ಅವಳು
ನನ್ನ ಮನದಲ್ಲಿ 
ನಿಂತುಕೊಳ್ಳಲಿಲ್ಲ.
ನೆಲೆ ನಿಂತದ್ದು
ನನ್ನ ಕಣ್ ರೆಪ್ಪೆಯ
ಒಳಭಾಗದಲ್ಲಿ.
ಈಗ ನಾನವಳ
ಮರೆಯಬೇಕೆಂದರೂ
ಮರೆಯಲಾಗುತ್ತಿಲ್ಲ;
ಕಣ್ಣ ಮುಚ್ಚದೆಯೆ 
ನಾ ಬದುಕುವಂತಿಲ್ಲ.
ಕಣ್ಣ ಮುಚ್ಚಿದೊಡನೆ
ಅವಳೇ ಕಾಣುವಳಲ್ಲ.

---K.GP

Tuesday, 24 January 2012


ಬನ್ನಿ ಮುದ್ದಾದ
ಪದಗಳೇ
ನನ್ನ ಮನದ
ಮನೆಯಿಂದ;
ಮಿಂಚುತ್ತಲಿರಿ
ನೀವು ತೊಡುವ
ಬಣ್ಣ ಬಣ್ಣದ
ಭಾವನೆಯ
ಧಿರಿಸಿನಿಂದ;
ಅಚ್ಚುಕಟ್ಟಾಗಿ
ನಿಂತುಕೊಂಡು
ಕವಿತೆಯೆನುವ
ಗುಂಪಾಗಿ
ಹಂಚಿಬಿಡಿ
ನೋಡುಗರ
ಕಣ್ಣಿಗಾನಂದ.