Wednesday, 29 February 2012

ನಮ್ಮ ಪ್ರಧಾನಂತ್ರಿಯ

ಅಂಕಿತನಾಮ

"ಮನ ಮೋಹನ ಸಿಂಗ್"

ಸದ್ಯದ ಪರಿಸ್ಥಿತಿಯಲ್ಲಿ

ಅವರ ಅನ್ವರ್ಥ ನಾಮ

"ಮೌನ ಮೋಹನ ಸಿಂಗ್"

Monday, 27 February 2012


ಬೆಳಕಿರದ ಹೊತ್ತಿನಲಿ,
ಸದ್ದಿರದ ಸಮಯದಲಿ ನಡೆಯುತ್ತಿದ್ದ
ಇರುಳ ರಾಜನ ಅಟ್ಟಹಾಸವ
ನಿಲ್ಲಿಸಲು ಬಂದೆಯಾ ರವಿಯೇ..
ಹೆದರಿರುವ ತರುಲತೆಗಳ ಮೈಯಲ್ಲಿ
ಇಬ್ಬನಿಯ ಬೆವರು ಕಂಡು ಬಂದೆಯಾ ರವಿಯೇ..
ಕಾರಿರುಳ ಅಕ್ರಮವನೆಲ್ಲಾ ಕಾಣಲಾಗದೇ
ಮಂಜಿನ ಮುಸುಕಿನಲಿ ಅಡಗಿ ಕುಳಿತ
ಭುವಿಯ ಹೊರಗೆ ಕರೆ ತರಲು ಬಂದೆಯಾ ರವಿಯೇ..
ಬೆಚ್ಚಿ ಬಿದ್ದು ಆಗಸದಿ ಹಾರಲಾಗದೇ
ಮರದಲ್ಲೇ ಚಿಲಿಪಿಲಿ ಎಂದು ಅಳುತ್ತಿದ್ದ
ಹಕ್ಕಿಗಳ ಸಂತೈಸಲೆಂದು ಬಂದೆಯಾ ರವಿಯೇ
ಕನಸಿನಾ ಲೋಕದಲೇ ತೇಲಾಡುತ್ತಿರುವ
ಮನುಜರನೆಲ್ಲಾ ಬಡಿದೆಬ್ಬಿಸಿ ದುಡಿದು
ಸಾಧಕರಾಗುವ ಚೈತನ್ಯವನು ಕೊಡಲು ಬಂದೆಯಾ ರವಿಯೇ
ಇನ್ನಾದರೂ ಹೇಳು ರವಿಯೇ.. ನೀ ಕಡಲಿನಾಳದಿಂದ
ಆಗಸಕೆ ಪ್ರತಿದಿನವೂ ಬರುವುದಾದರೂ ಏಕೆ..???


ಕಟ್ಟು ಮಸ್ತಾದ ದೇಹ, 
ಕಣ್ಣೊಳಗೆ ಸ್ವಾತಂತ್ರ್ಯದ ಕನಸು
ಮನದೊಳಗೆ ಸದಾ ಕ್ರಾಂತಿಯ ಜ್ವಾಲಾಮುಖಿ
ಮೆದುಳಿನಲಿ ನೂರಾರು ಯೋಜನೆಗಳು
ಆಂಗ್ಲ ಜನರ ಹುಟ್ಟಡಗಿಸುವ ಯೋಚನೆಗಳು
ಇವರ ಗರಡಿಯಲೇ ಬೆಳೆದು ನಿಂತರು
ಭಗತಸಿಂಗರಂತಾ ಕ್ರಾಂತಿಕಾರಿಗಳು
ಆಂಗ್ಲ ಸಿಪಾಯಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಾ
ಬೀಗುತ್ತಿದ್ದರು ತನ್ನ ಮೀಸೆಯನು ತಿರುವುತ್ತಾ
ಬಿಳಿಯರ ಕೈಗೆ ಸಿಗಲಾರೆ ಎನುವ ಮಾತನುಳಿಸುವ ಸಲುವಾಗಿ
ತನ್ನ ತಾನೆ ಹತ್ಯೆಗೈದವರಿವರು
ತಾಯಿ ಭಾರತಿಗೆ ತನ್ನ ನೆತ್ತರನೇ ಅರ್ಪಿಸಿದರಿವರು
ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದರಿವರು

ಅಪ್ರತಿಮ ದೇಶಭಕ್ತ  ಚಂದ್ರಶೇಖರ ಆಜಾದರಿಗೆ ನನ್ನ ಸಣ್ಣ ನುಡಿ ನಮನ



ಕಸಿದು ತಿನ್ನುವ ತಾಕತ್ತು ನನಗಿಲ್ಲ
ಆದರೂ ಹೊಟ್ಟೆ ಹಸಿದಿದೆಯಲ್ಲ
ಉಳ್ಳವರು ತಿಂದುಳಿದುದನು ಚೆಲ್ಲಿದರೇ ಹೊರತು
ನನ್ನೊಳಗಿನ ಹಸಿವಿನ ಕುರಿತು ವಿಚಾರಿಸಲಿಲ್ಲ
ನನ್ನ ಬಳಿ  ಕರೆದು ತಿನ್ನಲೇನೂ ಕೊಡಲಿಲ್ಲ
ಆದರೂ ಅವರ ಬಗೆಗೆ ಮುನಿಸಿಕೊಳ್ಳುವುದಿಲ್ಲ
ಚೆಲ್ಲಿರುವ ಆಹಾರವಾದರೇನಂತೆ ನನ್ನ ಹಸಿವ ನೀಗಿಸುವುದಲ್ಲ
ಮಿಗಿಲಾಗಿ ಈ ತುತ್ತು ಭೂತಾಯಿಯ ಬಟ್ಟಲಿನಲ್ಲಿಹುದಲ್ಲ


ಅವಳ ಉಡುಗೊರೆ

ನನ್ನ ಮತ್ತವಳ
ಪ್ರೇಮ ಗೀತೆಯಲಿ
ಪದಗಳ ಕಾಣಿಕೆ
ನನ್ನದೇ ಆಗಿತ್ತು.
ನಿನ್ನ ಕೊಡುಗೆ
ಏನೆಂದು ಕೇಳಿದಾಗ
ಕೊಡುವೆ ಕೊನೆಯಲ್ಲಿ
ಎನ್ನುವುದು ಅವಳ
ಉತ್ತರವಾಗಿತ್ತು,
ಅವಳ ಮಾತಿನ
ಗೂಡಾರ್ಥ ಅರಿಯದೇ
ಕಾತರದಿಂದ ಕಾದೆ,
ಉಡುಗೊರೆ ಪಡೆದಾಗಿನ
ಸಂತಸ ನನ್ನ ಪಾಲಿಗಿರಲಿಲ್ಲ
ಕಾರಣ....
ನನ್ನ ಪ್ರೇಮಕಾವ್ಯಕ್ಕೆ
ಪೂರ್ಣ ವಿರಾಮವೇ
ಅವಳ ಉಡುಗೊರೆಯಾಗಿತ್ತು.

Thursday, 23 February 2012


ಕವಿಯೋರ್ವ
ಇದ್ದಾಗ
ಏಕಾಂತದಲಿ
ಪ್ರಶಾಂತವಾದ
ಪ್ರಕೃತಿಯ
ಮಡಿಲಲ್ಲಿ;
ಖಾಲಿ ಹಾಳೆಯೊಂದಿಗೆ
ಇರಲು ಲೇಖನಿಯೊಂದು
ಅವನ ಕೈಯಲ್ಲಿ
ಹಾಕವವರಾರು
ಅವನ ಕಲ್ಪನೆಯ
ಕಾವ್ಯ ತೋಟಕ್ಕೆ
ಪೂರ್ಣವಿರಾಮದ ಬೇಲಿ

Wednesday, 22 February 2012


ಮನಸಿನಾ ಕೋಣೆಯೊಳಗೇ
ಇರಬಯಸುವ ನನ್ನ ನಗು
ಅವಳು ಕಣ್ಣೆದುರು ಬಂದೊಡನೆ
ಓಡೋಡಿ ಹೊರ ಬಂದು
ತುಟಿಯ ಹೊಸ್ತಿಲಲೇ
ಕುಳಿತುಕೊಳ್ಳುವುದೇಕೆ..???