maunada mathu
Wednesday, 30 May 2012
ವಿಳಂಬ..
ಅವಳ ಕೊರಳಿಗೆ
ಪ್ರೇಮ ನಿವೇದನೆ
ಎನುವ ಹಾರವನು
ಹಾಕುವ ಸಲುವಾಗಿ
ಅತಿ ಸುಂದರ
ಶಬ್ದಗಳ ಸುಮಗಳಿಗಾಗಿ
ಹುಡುಕಾಡುತ್ತಿದ್ದೆ,
ಆ ಕಲ್ಪನೆಯ ಹಾರ
ಸಿದ್ಧವಾಗುವಷ್ಟರಲ್ಲಿ
ಯಾರೋ ಒಬ್ಬಾತ
ಬೆಲೆಬಾಳುವ ತಾಳಿಯ
ಅವಳ ಕುತ್ತಿಗೆಗೆ
ಕಟ್ಟಿಬಿಟ್ಟಿದ್ದ....
Saturday, 26 May 2012
ಕವಿತೆ....
ಕಲ್ಪನೆಯ
ತತ್ತಿಗೆ
ಏಕಾಂತದ
ಕಾವು
ಸಿಕ್ಕಾಗ
ಬಿರಿದು
ಹೊರಬಂದ
ಪುಟ್ಟ ಮರಿ
ಈ ಕವಿತೆ..
Tuesday, 22 May 2012
ಜಪ
ಈಗೆನ್ನ
ಮನಸು
ಮಾಡುತಿದೆ
ನಿದಿರೆಯಾ
ಜಪ,
ಸಾಧನೆಯ
ಕನಸ
ಕಾಣುವುದು
ಅದರ
ಒಂದು ನೆಪ.
ನಿರಾಸೆ..
ಆಗಸದ
ರಣಾಂಗಣದಲಿ
ಮಳೆಹನಿಯ
ಶರವ ಬಿಡಲು
ಸಜ್ಜಾಗಿದ್ದಂತೆ
ಕಂಡರೂ..
ಕಾರ್ಮುಗಿಲೆನುವ
ವೀರ ಯೋಧರ
ಪಡೆ ನಡೆಸಿದ್ದು
ಬರಿಯ
ಪಥಸಂಚಲನ...
ತಪ್ಪು
ಸಾವ ಕಾಣತೊಡಗಿತು ಕತ್ತಲು
ಬೆಂಬಿಡದೆ ಕಾಡಿದ ಮುಪ್ಪಿಂದ,
ಜಾರತೊಡಗಿತು ಇಬ್ಬನಿಯ ಮುತ್ತುಗಳು
ಗಿಡ ಮರಗಳೆಲೆಯ ಚಿಪ್ಪಿಂದ;
ರವಿಯೆನುವ ಹೊಳೆವ ಕೂಸಿನ ಜನನವಾಯ್ತು
ಭುವಿಯ ಕಡಲೆನುವ ಗರ್ಭದಿಂದ.
ಸಂಯಮವ ಕಳೆದುಕೊಂಡ ಭೂದೇವಿ,
ಮತ್ತು ಇರುಳ ರಾಜನ ಒಂದು ತಪ್ಪಿಂದ.
Sunday, 20 May 2012
ಲಕ್ಷಣ..
ನಗುವಿರದ ನನ್ನೀ
ಮೊಗದ ಭುವಿಗೆ
ಕಣ್ಣೀರಿನ
ಮಳೆ ಬರುವ
ಸಣ್ಣ ಲಕ್ಷಣ...
ಬಹುಶಃ
ಮನದಾಗಸದಲಿ
ಕವಿದ ಅವಳ
ನೆನಪೆನುವ
ಮೋಡವೇ
ಇದಕೆ ಕಾರಣ..
Monday, 14 May 2012
ನೆರಳು..
ಬೆಳಗುವಾ
ಜ್ಯೋತಿಯಂತಿದ್ದ
ಅವಳ ಬಳಿ
ಪ್ರೀತಿಸುವೆಯಾ
ಎಂದುಲಿಯಿತು
ನನ್ನ ಕೊರಳು..
ಅದಕವಳಂದಳು
ಸುಟ್ಟು ಬಿಡುವೆ
ಬಳಿ ಬಂದರೆ
ನೀನಿಲ್ಲಿಂದ ತೆರಳು..
ಅವಳೆನುವ ಬೆಳಕಿಗೆ
ಬೆನ್ನುಹಾಕಿ
ಹೊರಟಿರುವ
ನನ್ನ ಮುಂದೆ
ಇರುವುದೀಗ,
ನನ್ನೊಳಗಿರುವ
ಅವಳ ನೆನಪೆನುವ
ಬೃಹದಾಕಾರದ ನೆರಳು..
Newer Posts
Older Posts
Home
Subscribe to:
Comments (Atom)