Monday, 25 July 2011

NANNAVALA KANASU

ನೀ ಎಲ್ಲಿರುವೆ? ನೀ ಹೇಗಿರುವೆ?
ನನಗಾಗಿ ಹುಟ್ಟಿರುವ ಓ ಚೆಲುವೆ
ಹಗಲಿರುಳೆನ್ನದೆ ನಾ ಹುಡುಕುತಿರುವೆ
ನೀನಾಗಿಯೇ ಎಂದು ನನ್ನ ಬಳಿ ಬರುವೆ ?

ನೀನಿರದ ಈ ಬಾಳಿನಲಿ
ನೋವಿಹುದು ಮನದ ಮುಲೆಯಲಿ
ಸಂತಸದ ನಗುವಿಲ್ಲ ವದನದಲಿ
ಕಾಯುವಿಕೆಯ ನೋವ ಸಹಿಸುತಿರುವೆ ಮೌನದಲಿ

ನಗುವಿನ ಸೆಲೆಯಾಗಿ ಬರಬಾರದೇಕೆ?
ನನ್ನ ತನುವಿಗುತ್ಸಾಹದುಸಿರಾಗಬಾರದೇಕೆ?
ಕಣ್ಣೊಳಗೆ ಮಿಂಚೊಂದ ತರಬಾರದೇಕೆ?
ನನ್ನ ಮೌನದುಪವಾಸವ ಕೊನೆಗೊಳಿಸಬಾರದೇಕೆ?

ಇಂದು ಮನದೊಳಗೆ ಬರಿಯ ನಿನ್ನಯ ಕಲ್ಪನೆ
ಮುಗಿಯಲಾರದ ಹತ್ತು ಹಲವು ಯೋಜನೆ
ಕಾದು ಬಳಲಿರುವ ನನ್ನೀ ಮನದ ಆಲೋಚನೆ
ಆ ಬ್ರಹ್ಮ ನನ್ನ ಕನಸುಗಳನ್ನೇ ನನ್ನವಳನ್ನಾಗಿಸಿಹನೆ??





Saturday, 23 July 2011

NESARA

ಮಬ್ಬು ಮಬ್ಬಾದ
ಮಂಜಿನ ನಡುವಲಿ
ಮೈ ತುಂಬಾ ಚಿನ್ನದ
ಒಡವೆಯ  ಧರಿಸಿ
ಬರುವನು ನೇಸರ
ಅವನೇಳುವ
ಮೊದಲೇ ಎದ್ದು
ಅವನ ಸೊಬಗ
ನೋಡಲೆಲ್ಲರಿಗೂ ಕಾತರ



HOLIKE

ಮೊದಲು ಬರುವ ಸಿಡಿಲು
ಜಗದಲಿಹ ಪತ್ನಿಯರಂತೆ
ಚುರುಕಾಗಿ, ವೇಗದಲಿ ಬರುವುದರಿಂದ
ಮತ್ತೆ ಬರುವ ಗುಡುಗು
ಜಗದಲಿಹ ಪತಿಯರಂತೆ
ತಡವಾಗಿ ಬಂದರು ಆರ್ಭಟಿಸುವುದರಿಂದ
ಮುಖ್ಯವಾದ ಕಾರಣವು ಮತ್ತೊಂದಿದೆ
ಗುಡುಗು ಅದೆಷ್ಟು ಆರ್ಭಟಿಸಿದರು
ಜಗಕೆ ಪ್ರಾಣಾಪಾಯವಿರುವುದು ಸಿಡಿಲಿನಿಂದ



GAURAVA

ಗುರು ಹಿರಿಯರ ಮಾತಿಗೆ 
ಬೆಲೆ ಕೊಡುವ ಮನಸ್ಸು
ಡೋಂಗಿ ರಾಜಕಾರಣಿಗಳಿಗೆ
ಬರುವುದಾದರೂ ಯಾವಾಗ?
ತಡೆದುಕೊಳ್ಳಲಾರದ ಹಸಿವೆಯ
ನೀಗಿಸಲು ತಣ್ಣನೆಯ ಜ್ಯೂಸು ಕುಡಿದು
ಜನರ ಮುಂದೆ ಆರಂಭಿಸಿದ್ದ
ಉಪವಾಸವನು ಮುಗಿಸಬೇಕಾದಾಗ

Tuesday, 5 July 2011

YEKAANGI

ಅವಳು ಒಲಿಯದೆಯೇ
ಚೆಲುವ ಚೆನ್ನಿಗ
ಪೂರ್ಣ ಚಂದಿರನೇ
ಹುಣ್ಣಿಮೆಯಲಿ ಏಕಾಂಗಿ
ಯಾವ ಧೈರ್ಯದಲಿ
ನಾನವಳ ಬಯಸಲಿ
ಚೆಲುವು ಕಿಂಚಿತ್ತು
ಇಲ್ಲದವನಾಗಿ


Monday, 4 July 2011

YETHAKE?

ಓ ಮನಸೇ ನೋವೇತಕೆ ನಿನ್ನ ತನುವಿಗೆ?
ಓ ಕನಸೇ ಸಾವೇತಕೆ ನಿನ್ನ ಬಾಳಿಗೆ?
ಸಿಗದೇ ಹೋದರೆ ನನಗೆ, ನನ್ನವಳ ಮುಗುಳು ನಗೆ.

ಅವಳ ನೋಟ ನನ್ನೆಡೆಗಿಲ್ಲದಿರೆ , ಬೆವರೇತಕೆ ? ನಯನವೇ ನಿನ್ನ ದೇಹಕೆ.
ಅವಳ ನುಡಿ ನನಗಾಗಿ ಬಾರದಿರೆ, ಆಹಾರವಿಲ್ಲವೇತಕೆ? ಕಿವಿಯೇ ನಿನ್ನುದರಕೆ;
ಅವಳ ತನುವಿನ ಗಂಧವಿಲ್ಲದ ಗಾಳಿ ಬಳಿ ಬಂದರೆ, ಹಸಿವಿಲ್ಲವೇತಕೆ? ಈ ನಾಸಿಕಕೆ;

ನಿಶ್ಚಲತೆ ಏತಕೆ? ನನ್ನ ಕಾಲಿಗೆ, ಅವಳೆನಗೆ ಕಾಣುವಂತಿದ್ದರೆ;
ಅವಳ ಕನಸು ಮೊಳೆಯುವುದೇತಕೆ  ಮನಸಿನೊಳಗೆ, ಅವಳೆನಗೆ ಕಾಣದಂತಿದ್ದರೆ;
ಪ್ರೀತಿಸುವಳೆಂಬ ಭ್ರಮೆಯೇತಕೆ? ಮನಸೇ ನಿನಗೆ, ನಗು ಮುಖದಿ ಅವಳೆನ್ನ ಕಂಡರೆ.

ಪ್ರೀತಿಯ ಹೊತ್ತೊಯ್ಯುತ್ತಿದ್ದರು ನನ್ನ ನೋಟ , ಕಾಣದೇತಕೆ   ಅದು ಅವಳ ಕಣ್ಣಿಗೆ,
ನನ್ನ ಈ ಪ್ರೀತಿಗೆ ಪ್ರತಿಫಲವಾಗಿ ಪ್ರೀತಿ ಸಿಗದೇನೋ ಅವಳಿಂದ ನನಗೆ
ಹಾಗಿದ್ದರೆ ಬೇಗದಲಿ ಬಾರದೇತಕೋ, ಸಾವೆನ್ನ ಬಳಿಗೆ, ಅವಳಿರದ ಬಾಳಿಗೆ.