ಹಿಂದೆಲ್ಲಾ ಹುಡುಗಿಯರು ಮುಸುಕಿನ ಮುಂಜಾನೆಯಲಿ ಮಿಂದು ಶುಚಿಯಾಗಿ ಹಾಕುತ್ತಿದ್ದರು ಮನೆಯ ಮುಂದೆ ಚಂದದ ರಂಗವಲ್ಲಿ; ಈಗ ಅಂತಹ ದೃಶ್ಯಗಳು ಕಾಣಲು ಸಿಗುವುದೇ ಇಲ್ಲ , ಬದಲಾಗಿ ವಿಫಲರಾಗುತ್ತಿದ್ದಾರೆ ಮುಂಜಾನೆ ಬೇಗನೇ ಬೆಡ್ಡಿನಿಂದ ಮೇಲೇಳುವಲ್ಲಿ.
ಅವಳಂದು ನನ್ನ ನೋಡಿ ನಕ್ಕ ಕ್ಷಣದಿಂದ ಮನದಲ್ಲೇ ಮಾಡತೊಡಗಿದ್ದೆ ಪ್ರೇಮ ಸಾಹಿತ್ಯದ ಕೃಷಿ... ಇಂದು ನನಗೆ ಕೈಕೊಟ್ಟಾಗಿನಿಂದ ಕಾವಿಯನು ಧರಿಸಿ ಗಡ್ಡವನು ಬೆಳೆಸಿ ಆಗಬೇಕೆಂದಿರುವೆ ನಾನೊಬ್ಬ ಋಷಿ
ನನ್ನ ಕೋಣೆಯ ಕಿಟಕಿಯನು ತೆರೆದಿಟ್ಟಿದ್ದೇನೆ, ಸದ್ದಿಲ್ಲದೆ ಮೆಲ್ಲಗೆ ಒಳ ಬರಲೆಂದು ನನ್ನ ಪ್ರೇಯಸಿ... ನನ್ನ ಅದೃಷ್ಟಕ್ಕೆ ಗುಯ್ ಗುಡುತ್ತಾ ಒಳ ಬಂದಿದ್ದು ನೆತ್ತರ ಹೀರೋ ದೊಡ್ಡ ದೊಡ್ಡ ನುಸಿ...
ಅಬ್ಬರದ ಗುಡುಗು ಗುಡುಗುತಿರಲು ಎದೆಗುಂದದೆ ನಿರಾಳವಾಗಿ ಹಾದಿಯಲಿ ನಡೆಯುತಿದ್ದಾತನ ನಿಲ್ಲಿಸಿ ಮೆಲ್ಲಗೆ ನಿಮಗೆ ಭಯವಿಲ್ಲವೇ..? ಎಂದು ಕೇಳಿದ ಪ್ರಶ್ನೆಗೆ... ಆತನಿತ್ತ ಉತ್ತರ ಬಲು ವಿಚಿತ್ರವಾಗಿತ್ತು. . . . . ನಾನೊಬ್ಬ ಅಮ್ಮಾವ್ರ ಗಂಡ.
ಬಹಳ ಪ್ರೀತಿಯಿಂದ ಬಿಳುಪಿನ ದಪ್ಪ ಕಾಗದದ ತುಂಬಾ ಮುದ್ದು ಮುದ್ದಾಗಿ ನಾ ಬರೆದ ಪ್ರೇಮ ಪತ್ರ , ನನ್ನವಳ ಕಣ್ ಕಡಲಲ್ಲಿ ತೇಲಿ ತೇಲಿ ಅವಳ ಮನದ ಸಾಗರವ ಸೇರುವ ಮುನ್ನ, ಅವಳ ತುಂಟ ತಮ್ಮನ ಕೈಸೇರಿ ಕೆಸರು ನೀರಲ್ಲಿ ದೋಣಿಯಾಗಿ ತೇಲಿ ಹೋಗಿ ಹತ್ತಿರದ ಚರಂಡಿಯಲ್ಲಿ ಮುಳುಗಿ ಬಿಟ್ಟಿತ್ತು.
ನೆನಪಿನಾ ಮೋಡದಿಂದ ಸುರಿಯುವ ಅವಳ ಕನಸುಗಳೆನುವ ಮಳೆಹನಿಗಳಿಗೆ, ಈ ಇರುಳ ಬಯಲಿನಲಿ ನನ್ನ ನಾ ತೆರೆದಿಡುವಾಸೆ; ಅದು ನೀಡುವ ಮುದದ ತಂಪನನುಭವಿಸಿ ಮುಂಜಾನೆಯವರೆಗೂ ಅದೇ ಭಾವದಲಿ ತೋಯುವಾಸೆ..
ಸಂಭಂಧಗಳ ಹೊಸ ಹೊಸ ಚಿಗುರೆಲೆಗಳು ಅದೆಷ್ಟೇ ಮೂಡಿದರೂ ಮುಂದೊಂದು ದಿನ ಮುನಿಸಿನ ಬಿರುಗಾಳಿಗೋ ಅಥವಾ ಸಾವಿನೊಂದಿಗೋ ಉದುರಿ ಹೋಗುವುದದು; ನಾನೆನುವ ಮರವ ಎತ್ತರಕೆ ಬೆಳೆಸಿದ ಪರಮಾತ್ಮನೆನುವ ತಾಯಿ ಬೇರೊಂದೆ ನನಗನಿಸಿದಂತೆ ಶಾಶ್ವತವಾಗುಳಿಯುವುದು.
ಭರತ ಭೂಮಿಯ ವೀರ ಯೋಧರಿಗಿದೋ ನನ್ನ ನಮನ ಮಾಡಿದರಂದು ಒಳಬಂದ ಪಾಕ್ ಯೋಧರ ನಿರ್ನಾಮ ಹವನ ನೆರೆಯ ಧೂರ್ತ ನರಿಗಳ ಕುತಂತ್ರ ಯೋಜನೆಯ ಹನನ ಭೂರಿ ಭೋಜನವನಿತ್ತು ಸಂತಸಪಡಿಸಿದರು ಯಮನ ಕಳೆದುಕೊಂಡಿದ್ದ ಕಾರ್ಗಿಲಿನದಾಯಿತು ಭವ್ಯ ಪುನರಾಗಮನ ದುರ್ವಿಧಿ.. ಆಳುತಿಹ ಭೂಪರು ಕೊಡುತಿಲ್ಲ ಈ ಸಾಧನೆಯೆಡೆ ಗಮನ ಆದರೂ ಬೇಸರದಿ ಕುಗ್ಗದಿರು, ಕೆಚ್ಚೆದೆಯ ಓ ಜವಾನ ನಿಮ್ಮೀ ಯಶೋಗಾಥೆಯ ಹಾಡುವೆವು ನಾವ್ ಪ್ರತಿದಿನ ಈ ಹಾಡ ಹಾಡುತಲೇ ಕಳೆಯಲಿ ನಮ್ಮ ಜೀವನ