Wednesday, 14 December 2011

ತಪೋಭಂಗ

ಮುಸ್ಸಂಜೆಯ ಹೊತ್ತಲ್ಲಿ
ಘೋರ ತಪಸ್ಸು 
ಮಾಡಲು ಕುಳಿತೆ;
ಉದ್ದೇಶ ಇಂದ್ರನ
ದೇವಲೋಕದ ಸಿಂಹಾಸನ,
ಮನದೊಳಗೊಳಗೆ
ಇನ್ನೊಂದು ಆಸೆಯಿತ್ತು.
ನನ್ನ ತಪವ ಭಂಗಗೊಳಿಸಲು
ರಂಬೆ,ಮೇನಕೆಯರ
ಇಂದ್ರ ಕಳುಹಿಸುವನಲ್ಲ;
ಅವರ ಸೌಂದರ್ಯವನು 
ನಾ ಆಸ್ವಾದಿಸಬಹುದಲ್ಲ.
ದೂರ್ವಾಸರ ಕೋಪವೀಗ
ಇಂದ್ರನ ಮೇಲೆ
ಬರಿಯ ಸೊಳ್ಳೆಗಳ ಕಳಿಸಿ
ನನ್ನ ತಪವ ಭಂಗಗೊಳಿಸಿದನಲ್ಲ...

Monday, 12 December 2011

ಹುಚ್ಚು

ಹುಚ್ಚು ಹೆಚ್ಚುತಿಹುದೀಗ ಭರತ ಖಂಡದಲಿ
ಸಾಂಕ್ರಾಮಿಕ ರೋಗದಂತೆ ಹರಡುತಿದೆ ಅತ್ಯಂತ ವೇಗದಲಿ
ನಾನಾ ತರಹದ ಹುಚ್ಚು, ಒಂದೇ ಬಗೆಯದ್ದಲ್ಲ
ಇಷ್ಟಪಟ್ಟು ಪಡಕೊಂಡಿರುವ ಹುಚ್ಚಿದು, ಚಿಕಿತ್ಸೆ ಇಲ್ಲವೆಂದೇನಿಲ್ಲ.

ಕೆಲವರಿಗೆ ಮಾತೃ ಭಾಷೆಯನೆ ಧಿಕ್ಕರಿಸೋ ಹುಚ್ಚು,
ಆಂಗ್ಲ ಭಾಷೆಯ ಮಾತನಾಡಿದರೆ ಪ್ರತಿಷ್ಠೆ ಹೆಚ್ಚುವುದೆನುವ ಹುಚ್ಚು
ಕೆಲವರಿಗೆ ವಿದೇಶಿ ಸಂಸ್ಕೃತಿಯನೇ ತಮ್ಮದಾಗಿಸಿಕೊಳ್ಳುವ ಹುಚ್ಚು
ಇಡಿಯ ಜಗವೇ ಮೇಲಿಟ್ಟ ಸಂಸ್ಕೃತಿಯ ತ್ಯಜಿಸೋ ಹುಚ್ಚು.

ಕೆಲವರಿಗೆ ಮಾತೃ ಧರ್ಮವನೆ ಹೀಯಾಳಿಸೋ ಹುಚ್ಚು
ಮುಲ ನಂಬಿಕೆಯನರಿಯದೆ, ಮುಢ ನಂಬಿಕೆಯೆಂದು ತಿರಸ್ಕರಿಸೋ ಹುಚ್ಚು
ಕೆಲವರಿಗೆ ತಾವು " ಜಾತ್ಯಾತೀತ "ರು ಎಂದೆನಿಸಿಕೊಳ್ಳೋ ಹುಚ್ಚು
ಸಮಾನತೆಯ ಬದಿಗಿರಿಸಿ ಸ್ವಧರ್ಮವನೆ ತುಳಿಯೋ ಹುಚ್ಚು.

ಕೆಲವರಿಗೆ ಖರ್ಚು ಮಾಡಲಾಗದ ಲಕ್ಷ ಕೋಟಿ ಹಣವ ಸಂಪಾದಿಸೋ ಹುಚ್ಚು
ಅದಕಾಗಿ ನೈತಿಕ ಮೌಲ್ಯಗಳನೆಲ್ಲಾ ಕೊಂದು ಭ್ರಷ್ಟರಾಗೋ ಹುಚ್ಚು
ಕೆಲವರಿಗೆ " ಬುದ್ಧಿಜೀವಿ " ಎನುವ ಪದವಿಯ ಪಡೆಯೋ ಹುಚ್ಚು
ಅದ ಪಡೆಯುವುದಕಾಗಿ ಅರ್ಥವಿರದ ವಾದಗಳ ಮಂಡಿಸೋ ಹುಚ್ಚು.

ಇವೆಲ್ಲದಕಿಂತಲೂ ಘೋರವಾದುದು; ಸಂಖ್ಯೆಯಲಿ ಹೆಚ್ಚಿರುವ ಸಜ್ಜನರಿಗಿರೋ ಹುಚ್ಚು
ನಡೆಯುತಿಹ ಅನ್ಯಾಯವನು ಪ್ರ್ತತಿಭಟಿಸದೇ, ಕಣ್ಣಿದ್ದೂ ಕುರುಡರಾಗೋ ಹುಚ್ಚು,
ಎಂದು ಬರುವುದೋ ಇವರಲ್ಲಿ ಈ ಹುಚ್ಚಿನಿಂದ ಮುಕ್ತಿ ಸಿಗೋ ಅರಿವಿನೆಡೆಗೆ ಸಾಗುವ ಹುಚ್ಚು
ನಮ್ಮೆಲ್ಲರೊಳಗಿನ ದೇಶಪ್ರೇಮದ, ಸ್ವಾಭಿಮಾನದ ಕಿಚ್ಚು, ಪಡೆದ ಅರಿವಿನಿಂದಾಗಲಿ ಹೆಚ್ಚು ಹೆಚ್ಚು.

Sunday, 11 December 2011


ದೂರದಲಿ ಕೇಳುತಿದ್ದ  ಭಾಸ್ಕರನ
ಏಳು ಕುದುರೆಗಳ ಹೆಜ್ಜೆಗಳ ಸದ್ದಿಗೆ
ಇರುಳು ಮಂಜಿನಂತೆ ಕರಗಿ ನೀರಾಗಿ
ಓಡಿ ಹೋದದ್ದಾದರೂ ಎಲ್ಲಿಗೆ ?

Thursday, 8 December 2011

ಬೇರಾರಿಗಾದರೂ 
ಕೊಡೋಣ 
ಎಂದು ನನ್ನ 
ಹೃದಯವ 
ವಾಪಾಸು ಕೊಡು 
ಎಂದು ಅವಳ 
ಮುಂದಿಟ್ಟೆ 
ನಾ ನನ್ನ ಬೇಡಿಕೆ.
ನಸು ಮುನಿಸಿನಲಿ
ಕೊಡಲಾಗದೆನಲು
ಅವಳು ಮುಂದಿಟ್ಟ ಕಾರಣ;
ಅಗಿದೆಯಂತೆ ಅದೀಗ 
ಅವಳ ಮುದ್ದಿನ ಮಗನ 
ಅಚ್ಚುಮೆಚ್ಚಿನ ಆಟಿಕೆ

Saturday, 3 December 2011



ಹೆದರಿ ಅಡಗಿ ಕುಳಿತಿರುವೆ ಏಕೆ ರವಿಯೆ
ಇರುಳು ಕಳೆಯುವ ಸಮಯವಾಯಿತು ಬೇಗ ಬಾ,
ಹಕ್ಕಿಗಳು ಹೇಳುತಿದೆ ನಿನ್ನಾಗಮನಕೆ ಪರಾಕು
ಕೇಳುವ ಆಸೆ ನಿನ್ನೊಳಗಿದ್ದರೆ ನೀ ಭುವಿಗೆ ಬಾ,
ಬಾನಿನಂಗಳದಿ ಚಂದಿರನ ಕೋಟಿ ತಾರೆಗಳ ಸೈನ್ಯವಿಲ್ಲ
ಆ ಅಂಜಿಕೆಯ ತೊರೆದು, ಶರಧಿಯ ಮುಸುಕ ತೆರೆದು,
ಬೆಟ್ಟ ದಿಬ್ಬಗಳನೇರಿ ಬಾ, ನೀ ಧರೆಗೋಡೋಡಿ ಬಾ
ನನ್ನ ಮೌನದ ತಾಕತ್ತು 


ನನಗೆ ಗೊತ್ತೇ ಇರಲಿಲ್ಲ;

ಅವಳು ತನ್ನೆಲ್ಲಾ ತಪ್ಪುಗಳ


ಮೆಲುಕು ಹಾಕುತಿಹಳಲ್ಲ ..!!

Friday, 2 December 2011




ಬಾನ ಬಿರಿವಂತ ಸಿಡಿಲಿಗೂ ನನ್ನ ಸುಡಲಾಗದು,
ನಾ ನಿನ್ನ ನೆರಳಿನಡಿಯಲಿದ್ದರೆ...
ಯುದ್ಧ ತರುವ ಸಾವಿಗೂ ಕೂಡ ನೋವ ಕೊಡಲಾಗದು , 
ನೀ ನನ್ನೆದೆಯ ಮೇಲಿದ್ದರೆ..