Thursday, 11 December 2014

ಆಧ್ಯಾತ್ಮದ ಬೆಳಗು


ಬೆಳಗು ಬರಿಯ ಬೆಳಗಲ್ಲ
ಇದೆ ಅಲ್ಲೊಂದು ಆಧ್ಯಾತ್ಮಿಕತೆ,
ನೇಸರನೆ ಇಲ್ಲಿ
ದಿವ್ಯಜ್ಯೋತಿ ಸ್ವರೂಪದ ಪರಬ್ರಹ್ಮ,
ಜಗಕೆ ಸುಖದ
ಬೆಳಕನು ಚೆಲ್ಲಲಿವನೆ ಕಾರಣ,
ಇವನಿಲ್ಲದಿರೆ ಕತ್ತಲ ದುಃಖ,
ಅಲ್ಲೂ ಕೆಲವೊಮ್ಮೆ ಚಂದಿರಗೆ
ತನ್ನ ಬೆಳಕ ಕೊಟ್ಟು
ನಮ್ಮ ಬಾಳಿಗೆ ತಂಬೆಳಕ ಕೊಟ್ಟಾನು,
ಅವನಿಲ್ಲ ಎನುವುದೂ ಒಂದು ಭ್ರಮೆ,
ಅವನಿರುವಿಕೆ ನಮಗೆ ಕಾಣುವುದಿಲ್ಲವಷ್ಟೇ,
ಅವನದೆಲ್ಲೋ ಇನ್ನಾರ ಬದುಕನೋ
ಬೆಳಗಿಸುತ್ತಿದ್ದಿರಬಹುದು.
ನಮ್ಮದೇ ಪಾಪ ಕರ್ಮಗಳಿಗೆ
ಶಿಕ್ಷೆಯಾಗಿ ತಾನತ್ತ ಸರಿದಿರಬಹುದು
ಆದರೂ ಮತ್ತೆ ಬರದಿರುವವನವನಲ್ಲ
ಮತ್ತೆ ಮೂಡಿ ಬರಲು
ಸಜ್ಜಾಗುತ್ತಿದ್ದಿರಬಹುದು.
ಕಾಲದ ಜೊತೆ ಕಾಯುವುದಷ್ಟೇ
ನಮ್ಮ ಧರ್ಮ,
ಭರವಸೆಯ ಹೊಸ ಕಿರಣದಿಂದಲಿ
ಮತ್ತೆ ನಮ್ಮ ಬಾಳನು
ಬೆಳಗುವನವನೆನುವುದು ಖಚಿತ.
ಅದಕೆ ನನ್ನ ಪಾಲಿಗೆ
ಬರಿಯ ಬೆಳಗಲ್ಲ ಪ್ರತಿ ಬೆಳಗು
ನನಗದು ಆಧ್ಯಾತ್ಮಿಕತೆಯ ಬೆರಗು

ನಿರೀಕ್ಷೆ..


ಟಕ್ಕು ಟಕ್ಕು
ಹೈ ಹೀಲ್ಡಿನ
ಸದ್ದುಗಳೇ
ತುಂಬಿರುವ
ಈ ಕಾಲದಲೂ
ಘಲ್ ಘಲ್
ಗೆಜ್ಜೆಯ
ಹೆಜ್ಜೆಯವಳ
ನಿರೀಕ್ಷೆ..

Friday, 5 December 2014

ಸ್ಮೈಲು


ಕೆಮರಾ ಒಂದು
ಅಡ್ಡ ಇದ್ದಾಗಲಷ್ಟೇ
ಅವಳು...
ನನ್ನ ಒಂಟಿ
ಕಣ್ಣಿನ ನೋಟಕೆ
ಸ್ಮೈಲು ಕೊಡೋದು

ಇಬ್ಬನಿ


ಗೆಳತೀ..
ಮನದ ಮೂಡಣದಲ್ಲಿ
ನಿನ್ನ ನೆನಪು
ಮೂಡುತಿದೆ ಎನುವುದಕೆ,
ಕಣ್ಣಿನೆಲೆಯ ತುದಿಯಲ್ಲಿ
ಧುಮುಕಿ ಬಿಡಲು
ಹಾತೊರೆಯುತಿಹ
ಇಬ್ಬನಿಯೇ ಸಾಕ್ಷಿ

ಬೆರಗು


ಮೊಣಕಾಲಮೇಲೆ
ಬೆಸೆದ ಕೈಗಳ
ಹಾಸನು ಹಾಸಿ
ನಿನ ಮೊಗವ
ಅದರಮೇಲಿಟ್ಟು,
ಮನದೊಳಗೆ
ನನ್ನ ನೆನಪುಗಳಿಗೆ
ಕರೆಯಕೊಟ್ಟು
ಕುಳಿತು ಬಿಡು ಗೆಳತೀ,
ಆ ನೆನಪುಗಳು
ನಿನ್ನ ಮೊಗದಿ
ಚಿತ್ರಿಸುವ
ಮಂದಹಾಸವ
ನೋಡಿ
ನಾನು ಬೆರಗಾಗಬೇಕಿದೆ.

ಭಾವನೆ


ಮನದೊಳಗೆದ್ದ
ನೂರೆಂಟು
ಭಾವನೆಗಳ
ಅವಳಲಿ
ಹೇಳಿದ್ದೆನಷ್ಟೇ
.
.
.
.
.
.
.
.
ಅಷ್ಟಕ್ಕೇ..
" 108 "ರಲಿ ಹಾಕಿ
ಕಳುಹಿಸಿ ಕೊಟ್ಟಳಾ
ದುಷ್ಟೆ

ತಾಕತ್ತು


ಗೆಳತೀ..
ನಾ ಹೊದ್ದುಕೊಳ್ಳುವ
ದಪ್ಪ ಕಂಬಳಿ
ಚಳಿಯನು
ತಡೆದೀತಷ್ಟೇ...
ನಿನ್ನ ನೆನಪನು
ತಡೆವಷ್ಟು
ತಾಕತ್ತು
ಅದಕ್ಕೆಲ್ಲಿದೆ...?