Monday, 9 February 2015

ಭ್ರಮೆ.



ಬರಿಯ ಸಿಹಿ
ತಿಂಡಿಯಿಂದಾಗಿ
ಬರುವ ಹುಳಗಳಿಂದ
ಮಾತ್ರ ಹಲ್ಲುನೋವು
ಬರುವುದೆಂಬ
ಭ್ರಮೆಯಲಿದ್ದೆ..
.
.
.
.
ನನ್ನವಳು ಮಾಡಿದ
ಚಕ್ಕುಲಿಯ ತಿಂದಾಗಿನಿಂದ
ಆ ಭ್ರಮೆಯಿಂದ
ಹೊರಬರುತ್ತಿದ್ದೇನೆ...

ಒಂಟಿತನ



ಪದಗಳು ಕವನದಾ
ಹಿಡಿತಕ್ಕೆ ಸಿಗದಾದಾಗ
ಅದೇನೋ ವಿಚಿತ್ರವಾದ
ಒಂಟಿತನದ ಭಾವ
ನನ್ನನೀಗೀಗ ಕಾಡುತ್ತದೆ.
ಮೊದಲೆಲ್ಲಾ ಹೀಗಿರಲಿಲ್ಲ
ಪದಗಳಿಗೂ ನನಗೂ
ತೀರಾ ಪರಿಚಯದ ನಂಟು
ಅಂತೇನೂ ಇದ್ದಿರಲಿಲ್ಲ.
ಅದು ತೀರಾ ಆಕಸ್ಮಿಕದ ಭೇಟಿ,
ನಾವಿಬ್ಬರೂ ಕವನ ಕಟ್ಟೆಯಲಿ
ಜೊತೆ ಜೊತೆಗಿರಲು
ನೋಡುಗರ ಮೆಚ್ಚುಗೆಯ
ಮಾತುಗಳೇ ಅವುಗಳ
ಸನಿಹವ ಮತ್ತೆ ಮತ್ತೆ
ಬಯಸುವಂತೆ ಮಾಡಿದ್ದು.
ಅಂದು ಆ ಮೆಚ್ಚುಗೆಯ
ಮಾತುಗಳಿಗೆಲ್ಲಾ
ಕಿವಿಗೊಡಬಾರದಿತ್ತೇನೋ...?
ಹೀಗೆ ಒಂಟಿತನದ
ನೋವ ನುಂಗುವುದು
ನನಗಾಗ ದಕ್ಕುತ್ತಿರಲಿಲ್ಲವೇನೋ...?
ಹಾಗಿರುತ್ತಿತೋ ಏನೋ...?
ಹೀಗಿರುತಿತ್ತೋ ಏನೋ...?
ಎಂದು ಈಗ ಯೋಚಿಸಿ ಫಲವೇನು...?
ಗೀಚುವ ಗೀಳಿನ
ನೀರಿನೊಳಗಿಳಿದಾಗಿದೆ
ಆಗಾಗಾ ಒಂಟಿತನದ
ಚಳಿಯ ಸಹಿಸುವುದು
ಅನಿವಾರ್ಯವಾಗಿದೆ.

Friday, 30 January 2015

ವಿವೇಕ-ಆನಂದ


ನಿನ್ನಣಿಮುತ್ತುಗಳ
"ವಿವೇಕ"ಯುತವಾಗಿ
ಅರ್ಥೈಸಿ
ಮನದಾಳದಲಿ
ಭದ್ರವಾಗಿರಿಸಿ,
ತೋರ್ಬೆರಳ ನೀಟಿ
ನೀ ತೋರಿದ
ಹಾದಿಯಲೇ
ಸಾಗಿದರೆ ಸಾಕು
ಭಾರತೀಯರೆಲ್ಲರಿಗೂ
ಭಾರತಮಾತೆಗೂ
"ಆನಂದ"ವೇ...

ಮೇ-ಕಪ್ಪು


ಮೊಗವ
ಸಿಂಗರಿಸಿಕೊಳ್ಳುವ
ಮೇಕಪ್ಪು ಸೆಟ್
ಕೊಂಡುಕೊಂಡಾಕೆ
ಪತ್ನಿಯಾದರೂ...
ಬಿಲ್ ಕಟ್ಟುವಾಗ
ಪತಿರಾಯರ
ಮುಖ ಪೂರ್ತಿ
ಕಪ್ಪು ಕಪ್ಪಾಗಿತ್ತು

ಆಸೆ..


ಇಡಿಯ ದಿನದಲಿ
ನಿನ್ನ ನೋಡುವಷ್ಟು
ಗಳಿಗೆಯ ಕಾಲು
ಭಾಗದಷ್ಟಾದರೂ
ನನ್ನ ಅವಳು
ನೋಡಲಿ..
ಎನುವುದೇ
ನನ್ನ ಆಸೆ
.
.
.
.
.
.
.
.
ಓ ಕನ್ನಡಿಯೇ...

ನಿಸ್ಸೀಮ...


ಗೆಳತೀ..
ಬರಿಯ
ನಿನ್ನ ಸುಖದ
ಸಂಕಲ್ಪಕೆ
ಬದ್ಧನಾದ
ದಿನದಿಂದ,
ನನ್ನ ಕಣ್ಣೀರ
ನದಿಗಣೆಕಟ್ಟು
ಕಟ್ಟುವುದರಲಿ
ನಿಸ್ಸೀಮನಾಗಿದ್ದೇನೆ.

ಹಾರ


ಪ್ರತಿ ಇರುಳಲಿ
ಸುರಿಯುವ
ನನ್ನ ಕಣ್ಣೀರ
ಮುತ್ತುಗಳ
ನಾ ಪೋಣಿಸುವುದಿಲ್ಲ
ಅವಳ
ಕೊರಳಲಿರುವ
ಅವನಿತ್ತ
ಬಂಗಾರದೊಡವೆಗಳಿಗೆ
ಇದು ಸರಿಸಾಟಿಯಲ್ಲಾ