ಇಂದೇಕೋ ಮಾಲಿ ಬಲು ಬೇಗನೆ ಬಂದ
ಮಾಲೀಕನೇ ಕಳುಹಿಸಿದನಂತೆ.
ಕಿತ್ತು ತನ್ನಿ ನನ್ನ ಮತ್ತು ನನ್ನ ಬಳಗವ ಎಂದನಂತೆ.
ಹೆತ್ತೊಡಲಿಂದ ಬೇರ್ಪಡಿಸುವುದು ಯಾಕೆ?
ನಾ ಕೇಳಿದ ಪ್ರಶ್ನೆಗೆ ಮಾಲಿ ನಕ್ಕು ನುಡಿದ
"ಇಂದು ಪ್ರೇಮಿಗಳ ದಿನ ತಾನೆ"
"ನಿನಗೆ ಬಹು ಬೇಡಿಕೆ ಮಾರುಕಟ್ಟೆಯಲಿ"
ನಾ ಮನದೊಳಗೇ ಅತ್ತೆ..
ಪ್ರೇಮಿಗಳ ದಿನದಲ್ಲಿ ನನಗೇಕೆ ಈ ಶಿಕ್ಷೆ?
ನನ್ನ ಮೈ ಬಣ್ಣ ಅವರ ಭಾವನೆಯ ಬಿಂಬಿಸುವುದಂತೆ.
ಅವರೊಳಗೆ ನನ್ನ ವಿನಿಮಯ ಪ್ರೇಮದ ಸಂಕೇತವಂತೆ.
ಯಾಕೆ ಅವರಿಗೇನು ಮಾತು ಬಾರದೆ..?
ನಾನೇಕೆ ಬಲಿಯಾಗಬೇಕು ಇವರ ಪ್ರೇಮಕ್ಕೆ..
ಕಾಲ ಕಸವಾಗುವುದಷ್ಟೇ..ಯುವತಿಯ ಮುಡಿಯಲ್ಲಿ ನೆಲೆಯಿಲ್ಲ,
ಹಿಂದಿನ ಕಾಲದಂತಲ್ಲ ಯುವತಿಯರಿಗಿಂದು ನನ್ನ ಮುಡಿವ ಮನಸಿಲ್ಲ.
ಪ್ರಿಯಕರನ ತೋಳ್ತೆಕ್ಕೆಯ ಸೇರಿದೊಡನೆ ಕಸದ ತೊಟ್ತಿಗೆ ನನ್ನ ಎಸೆವರಲ್ಲ.
ಭಗವಂತನ ಪಾದದಲಿ ನೆಲೆಯ ಕಾಣುವ ನನ್ನ ಬಯಕೆಯ
ಅರ್ಥವಿರದ ಆಚರಣೆಯ ನೆಪದಲ್ಲಿ ನುಚ್ಚು ನೂರುಗೊಳಿಸಿದರಲ್ಲ.