ಅವಳ ಕೊರಳಿಗೆ
ಪ್ರೇಮ ನಿವೇದನೆ
ಎನುವ ಹಾರವನು
ಹಾಕುವ ಸಲುವಾಗಿ
ಅತಿ ಸುಂದರ
ಶಬ್ದಗಳ ಸುಮಗಳಿಗಾಗಿ
ಹುಡುಕಾಡುತ್ತಿದ್ದೆ,
ಆ ಕಲ್ಪನೆಯ ಹಾರ
ಸಿದ್ಧವಾಗುವಷ್ಟರಲ್ಲಿ
ಯಾರೋ ಒಬ್ಬಾತ
ಬೆಲೆಬಾಳುವ ತಾಳಿಯ
ಅವಳ ಕುತ್ತಿಗೆಗೆ
ಕಟ್ಟಿಬಿಟ್ಟಿದ್ದ....
ಪ್ರೀತಿಯ ದೊಡ್ಡ ಅಲೆಯಾಗಿ
ನನ್ನ ಬಳಿ ಹೊರಟಾಗ
ಅವಳೊಂದು ಕಡಲಿನ ತೆರೆ,
ಆದರೇಕೋ ನನ್ನ ಮುಟ್ಟುವ
ಕ್ಷಣದಲ್ಲಿ ಆಗುವಳಾಕೆ
ಬರಿಯ ಕನಸಿನ ನೊರೆ,
ಮತ್ತೆ ಮತ್ತೆ ನನ್ನ ಬಳಿ
ಬರುವಂತೆ ಕಂಡರೂ
ಪ್ರತಿ ಸಾರಿಯೂ ನಾನಾಗುವೆ
ನಿರಾಸೆ ಮತ್ತು ದುಃಖದ ಕೈಸೆರೆ
ಅಬ್ಬಾ ತಡೆಯಲಾಗುತ್ತಿಲ್ಲ
ಈ ಎದೆಯೊಳಗಿನ ಉರಿ
ಎನುವ ಮಾತ ಕೇಳಿಸಿಕೊಂಡ
ನನ್ನ ಮಾಜಿ ಪ್ರೇಯಸಿ
ಅದು ತನ್ನಿಂದಾಗಿ ಎಂದುಕೊಂಡು
ಮುಖದಲ್ಲಿ ತೋರಿಸಿಯೇ ಬಿಟ್ಟಳು
ಒಂದು ಅಹಂಕಾರದ ನಗು;
ಈ ಉರಿಯ ಹಿಂದಿರುವ ಕಾರಣ
ಅವಳಿಗೇನು ಗೊತ್ತು,
ಗೆಳೆಯನ ಮದುವೆಯಲ್ಲಿ
ಗಟ್ಟಿಯಾಗಿ ಉಂಡ ಕಾರಣ
ನನ್ನನ್ನು ಕಾಡುತ್ತಿತ್ತು
ಹಾಳಾದ ಹುಳಿತೇಗು..
ತನ್ನದೇ ದಿನ ಎಂದು
ಹೆಚ್ಚಿನ ಸಡಗರವಿಲ್ಲ,
ಉಳಿದ ದಿನಗಳಂತೆಯೇ
ಬೆಳಕಿನೊಡೆಯ ಬಂದನಲ್ಲ,
ಆದರೆ ಭುವಿಯ ಮೇಲಿನ
ಜನರಿಗೆ ಹಾಗಲ್ಲ...
ರವಿವಾರವೆಂದರೇನೋ ಖುಷಿ,
ದುಡಿತಕ್ಕೆ ರಜೆ ಇರೋ ನೆಪದಲ್ಲಿ
ತಡವಾಗಿ ಏಳಬಹುದಲ್ಲ...