ಅದೊಂದು ದೊಡ್ದ ಆಸ್ಪತ್ರೆ... ಅಲ್ಲಿ ಒಳಗಿದ್ದವರೆಲ್ಲರದ್ದೂ ಒಂದೊಂದು ತರಹದ ಆತಂಕ, ತಮ್ಮದೇ ಆದ ವೇದನೆ, ಸಹಿಸಿಕೊಳ್ಳಲಾಗದ ನೋವುಗಳು ಸಾವಿನ ಭಯ, ಇನ್ನೊಂದಿಷ್ಟು ಜನರ ಕಂಗಳಲ್ಲಿ. ಮುಖವು ಮೌನವನೇ
ಬಿಂಬಿಸುತ್ತಿದ್ದರೂ.. ಬಿಕ್ಕಿ ಬಿಕ್ಕಿ ಅಳುವ ಸದ್ದು ಒಳಗೆಲ್ಲಿಂದಲೋ ಕಿವಿಗಪ್ಪಳಿಸುತ್ತವೆ, ಇಂತಹಾ ದುಃಖದ ಮೋಡವಿಲ್ಲಿ ಕವಿದಿದ್ದರೂ, ಇರುವ ಹೆಚ್ಚಿನವರೆಲ್ಲರ ಕಣ್ಣಾಲಿಗಳು ತುಂಬಿದ್ದರೂ.. ಬಾಗಿಲ ಬಳಿಯಲ್ಲೊಂದಷ್ಟು ಜನ ಬೆಡಗಿಯರು ಮುಖಕೂ , ತುಟಿಗಳಿಗೂ ಒಂದಷ್ಟು ಬಣ್ಣವ ಮೆತ್ತಿ ಸಿಂಗರಿಸಿಕೊಂಡು , ಸೌಂದರ್ಯ ಪ್ರದರ್ಶಿಸುತಲೇ ಕಾರ್ಯನಿರತರಾಗಿರುವುದು ಮಾನವೀಯತೆಗೊಂದು ದ್ರೋಹವಲ್ಲದೇ ಇನ್ನೇನು...?
ದಣಿದ ರವಿಯನು
ಕಡಲಾಳಕ್ಕೆ ದೂಡಿ,
ಜಗವನಾವರಿಸಿ
ಜನರ ದೃಷ್ಟಿಯಿಂದ
ಎಲ್ಲವನೂ
ಮರೆಮಾಚುವಂತೆ
ಮಾಡಿದ ಇರುಳರಾಜನಲಿ
ಭಿನ್ನವಿಸಿದೆ,
ಕಾಡುತಿರುವ
ನನ್ನವಳ ನೆನಪನ್ನು
ಕಾಣಿಸದಂತೆ
ಮಾಡುವೆಯಾ ಎಂದೆ,
ಈಗ ನೋಡಿದರೆ
ನೇಸರನ ಸೋಲಿಸಿದವನ
ಪೌರುಷವೇ ಅಡಗಿಹೋಗಿದೆ,
ಈಡೇರಿಸಲಾಗದ
ನನ್ನ ಬೇಡಿಕೆಯು
ಅವನ ಕತ್ತನ್ನೇ ಬಾಗಿಸಿದೆ.
ಜೀವನದ ಪ್ರತಿಯೊಂದು ಹಂತದಲೂ ನನ್ನ ಸಂತೋಷವ ಕಂಡು ನನಗಿಂತಲೂ ಹೆಚ್ಚು ಖುಷಿಪಡುತ್ತಿದ್ದ ನನ್ನ ಮುದ್ದಿನ ಅಮ್ಮ, ಇತ್ತೀಚಿಗೆ ಬದಲಾಗುತ್ತಿದ್ದಾಳೆ; ಬ್ರಹ್ಮಚರ್ಯದಲ್ಲಿನ ನನ್ನ ಸಂತೋಷವ ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾಳೆ, ನನ್ನ ಈ ಸಂತಸವ ಪೂರ್ತಿಯಾಗಿ ನಿಲ್ಲಿಸುವ ಸಲುವಾಗಿ, ತನ್ನ ಮೃದು ಹೃದಯವ ಕಲ್ಲಿನಂತೆ ಕಠೋರವಾಗಿಸಿ ಮದುವೆಯೆನುವ ಸೆರೆಮನೆಗೆ ದೂಡಿ ಬಿಡುವ ಸಂಚು ರೂಪಿಸುತ್ತಿದ್ದಾಳೆ.