ಕೆ.ಪಿ.ಟಿ ಕ್ಯಾಂಟೀನು
ಎಲ್ಲಾ ಕಾಲೇಜುಗಳಲಿ ಇರುವಂತೆ ಇದೆ
ನಮ್ಮ ಕೆ.ಪಿ.ಟಿಗೂ ಒಂದು ಕ್ಯಾಂಟೀನು.
ದೊರೆಯುವುದು ಊಟ ಮತ್ತು ನಾಲ್ಕಾರು ಬಗೆಯ ತಿಂಡಿಗಳು
ಆದರೆ ಬಯಸಬಾರದು ಅದರೊಳಗೆ ನಾವು ರುಚಿಯನ್ನು.
ಒಳಹೊಕ್ಕು ತಿಂಡಿಗಾಗಿ ಹಣ ನೀಡಿದೊಡನೆ ನಮ್ಮ
ಕೈ ಸೇರುವುದು ಮರಣವಿರದ, ಬಲಹೀನ ಕೂಪನ್ನು;
ಸವೆದರೂ ಸಾಯದೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿ
ಉಳಿಸಿಕೊಡುವುದದು ಮಾಲೀಕರಿಗೆ ಪ್ರಿಂಟಿಂಗ್ ಚಾರ್ಜನ್ನು.
ಊಟ, ದೋಸೆಗಳ ತಿನ್ನಲಿಲ್ಲಿ ಅಡ್ಡಿಯಿಲ್ಲ
ಆದರೆ "ಬನ್ಸು" ತಿನ್ನಲು ಮಾತ್ರ ಸ್ವಲ್ಪ ಕಷ್ಟ
ಬುತ್ತಿ ತರುವ ವಿದ್ಯಾರ್ಥಿಗಳು ಸಾಂಬಾರನು ಕೊಳ್ಳುವರು
ಆಗದಿದ್ದರೂ ಅದು ಅವರ ನಾಲಿಗೆಗೆ ಇಷ್ಟ.
ತೆಂಗಿನ ತುರಿಗಳು ಉಪ್ಪುಖಾರದ ನೀರಿನಲಿ ತೇಲುತ್ತಿದ್ದರೆ
ಅದುವೇ ಇಲ್ಲಿನ "ಸಾಂಬಾರು"
ಬರಿಯ ತೆಂಗಿನ ತುರಿಯು ಒತ್ತೊತ್ತಾಗಿದ್ದರೆ
ಅದಕೆ "ಚಟ್ನಿ" ಎನ್ನುವ ಹೆಸರು.
ಗಶಿಯೊಳಗೆ ಇರುವುದು ೩ ಬಗೆಗಳು
ಮೊನ್ನೆಯ "ಸೌತೆ", ನಿನ್ನೆಯ "ಹೆಸರು", ಇಂದಿನ "ಬೀಟ್ ರೂಟು"
ಮೂರು ದಿನದ ಗಶಿಯನ್ನು ಒಂದು ಮಾಡುವ ಉದ್ದೇಶ
ವೇಸ್ಟು ಆಗದಿರಲೆಂದು, ಮೊನ್ನೆ ನಿನ್ನೆಯ ಟೇಸ್ಟು.
ಬೇರೆಡೆಗೆ ಹೋಲಿಸಿದರೆ ರೇಟು ಕಡಿಮೆಯಾಗಿರುವುದರಿಂದ
ಬಡ ವಿದ್ಯಾರ್ಥಿಗಳು ತೋರಲಾರರು ಪ್ರತಿಭಟಿಸುವ ಧೈರ್ಯ .
ಆದುದರಿಂದ ಇಲ್ಲಿಗೇ ಬರುತ್ತಿರುತ್ತಾರೆ;
ಮನಸಿದ್ದು ಅಲ್ಲ, ಇದು ಅವರಿಗೆ ಅನಿವಾರ್ಯ