ಮಾಸವೊಂದರ ಮೊದಲೇ ನೋಟೀಸು ಬೋರ್ಡಿನಲಿ
ಪ್ರಕಟವಾಗುತ್ತಿತ್ತು ಪರೀಕ್ಷೆಯ ವೇಳಾಪಟ್ಟಿ
ಆದರೂ ಬರಿಯ ಒಂದು ವಾರದ ಮೊದಲಷ್ಟೇ
ಉತ್ತರವ ಉರುಹೊಡೆಯುತ್ತಿದ್ದೆ ಉಸಿರುಕಟ್ಟಿ
ಆ ರೀತಿ ಓದಬೇಕು, ಈ ರೀತಿ ಓದಬೇಕು
ಎಂದೆಲ್ಲಾ ಅಚ್ಚುಕಟ್ಟಿನ ಯೋಜನೆಗಳಿರುತ್ತಿತ್ತು ಹಲವು
ಯೋಜನೆಗಳ ರೂಪಿಸುವುದರಲೇ ನಾ ನಿಪುಣ
ಆದರದನು ಜಾರಿಗೊಳಿಸುವುದರಲಿ ಇದ್ದಿರಲಿಲ್ಲ ಒಲವು
ಅರ್ಧತಾಸಿನ ಅವಿರತ ಓದಿಗೆ
ಹತ್ತು ನಿಮಿಷದ ಬ್ರೇಕು ಬೇಕಿತ್ತು
ಸಮಯದ ಪರಿಪಾಲನೆ ಅರ್ಧತಾಸಿನದ್ದು ಮಾತ್ರ
ಬ್ರೇಕಿನ ಅವಧಿ ಮಾತ್ರ ಹತ್ತು ನಿಮಿಷವ ಮೀರುತ್ತಿತ್ತು.
ಅತ್ತಿತ್ತ ನಡೆದಾಡಿಕೊಂಡು ಓದುತ್ತಿದ್ದೆ,
ಸಾಕಾದಾಗ ಹಾಸಿಗೆಯಲಿ ಅಂಗಾತ ಮಲಗಿ ಓದುತ್ತಿದ್ದೆ.
ಹಿತ್ತಲ ಮರದ ಬೋಳಾದ ಗೆಲ್ಲನ್ನು ಕಂಡಾಗ ನೆನಪಾಯ್ತು
ಮಾವಿನ ಮರದ ಗೆಲ್ಲಲ್ಲಿ ಕುಳಿತೂ ಓದುತ್ತಿದ್ದೆ
ಪರೀಕ್ಷೆಯ ದಿನ ಹತ್ತಿರ ಬಂದಂತೆಲ್ಲಾ ಅದೇನೋ ಸಣ್ಣ ಭಯ
ಗೆಳೆಯರೆಲ್ಲಾ ಏನನ್ನು ನೋಡುತ್ತಿದ್ದಾರೆ ಅನ್ನೋ ಕುತೂಹಲ
ನಾ ನೋಡಿರದ ಪ್ರಶ್ನೆಯಾಗಿದ್ದರೆ ಹೇಳುವುದೇ ಬೇಡ
ನಾನೋದುತ್ತಿದ್ದುದ ಬಿಟ್ಟು ಅವರೋದುತ್ತಿದ್ದುದನು ನೋಡುವ ಹಂಬಲ
ಪರೀಕ್ಷೆಯ ಮುನ್ನಾ ದಿನ ಮೀಸಲು ಬರಿಯ ಸಾಮಾಗ್ರಿಗಳ ತಯಾರಿಗಾಗಿ
ರೆನಾಲ್ಡ್ಸ್ ಪೆನ್, ಮೊನಚು ಮಾಡಿದ ನಟರಾಜ ಪೆನ್ಸಿಲು, ಉದ್ದನೆಯ ಅಡಿಕೋಲು
ಕೋನ ಮಾಪಕ.. ಕೈವಾರ ತುಂಬಿದ ಕಂಪಾಸು ಬಾಕ್ಸು
ಅಣ್ಣನ ವಾಚೇ ಬೇಕು ಪರೀಕ್ಷೆಯಲಿ ಸಮಯವನು ನೋಡಲು.
ಪರೀಕ್ಷೆಯ ದಿನ ದೇವರ ಮೇಲಿನ ಭಕ್ತಿ ಉಕ್ಕಿ ಹರಿಯುತ್ತಿತ್ತು
ಅಪ್ಪ ಅಮ್ಮನ ಆಶೀರ್ವಾದದ ಅಗತ್ಯ ಅರಿವಾಗುತ್ತಿತ್ತು.
ಪರೀಕ್ಷಾ ಹಾಲಿನಲಿ ಓದಿದ್ದನ್ನು ಮನನ ಮಾಡಹೊರಟರೆ,
ಮನಸಿನಲಿ ಇರಬೇಕಾಗಿದ್ದುದೆಲ್ಲವೂ ಮರೆಯಾದಂತಿತ್ತು.
ಉತ್ತರ ಪತ್ರಿಕೆಯು ಕೈ ಸೇರಿದ್ದೆ ತಡ
ಚಂದದಲಿ ಹೆಸರು ಬರೆದು ಪ್ರಶ್ನೆ ಪತ್ರಿಕೆಯ ಕಾಯುತ್ತಿದ್ದೆ,
ಹಾಲಿನಲಿರುವ ಅಧ್ಯಾಪಕರ ಕೈಯಲ್ಲಿದ್ದ ಪತ್ರಿಕೆ
ಸಿಕ್ಕೊಡನೆ ಗೊತ್ತಿರುವ ಪ್ರಶ್ನೆಗಳಿಗಾಗಿ ಹುಡುಕಾಡುತ್ತಿದ್ದೆ,
ಮೊದ ಮೊದಲು ಗೊತ್ತಿರುವ ಪ್ರಶ್ನೆಗಳಿಗೆ
ನೀಡುತ್ತಿದ್ದೆ, ದುಂಡು ದುಂಡಾದ ಚಂದದ ಅಕ್ಷರಗಳ ಉತ್ತರ
ಜಾಣ ವಿದ್ಯಾರ್ಥಿಗಳ ಬರವಣಿಗೆಯ ಗಮನಿಸಿ ಗಮನಿಸಿ
ಸಮಯ ಕಳೆದು ಹೋದಾಗ ಗೊತ್ತಿದ್ದುದೆಲ್ಲವ ಬರೆದು ಮುಗಿಸಲು ಅವಸರ
ಅಬ್ಬಾ ಬರೆದು ಮುಗಿಸಿ ಹೊರ ಬಂದರೂ ಸುಖವಿಲ್ಲ
ತಪ್ಪು ಉತ್ತರಗಳ ಬರೆದುದು ಗೊತ್ತಾದಾಗ ಮನಸಿಗೆ ನೆಮ್ಮದಿಯಿಲ್ಲ
ಈ ಪರೀಕ್ಷೆಯ ಜಂಜಾಟದಿಂದ ಈಗ ಮುಕ್ತಿ ಸಿಕ್ಕಿದ್ದರೂ
ಇಂದಿನ ವಿದ್ಯಾರ್ಥಿಗಳ ಕಂಡಾಗ ಏನನ್ನೋ ಕಳೆದುಕೊಂಡಂತಾಗುವುದಲ್ಲ