Sunday, 27 January 2013

ಅಪಾರ್ಥ...

ನಾನೇನೋ
ಹಾಗೇ ಸುಮ್ಮನೆ
ಅವಳ ಫೋಟೋಗಳನ್ನ
ಲೈಕ್ ಮಾಡುತ್ತಿದ್ದೆ ಅಷ್ಟೇ...
ಅವಳೋ ಇದ್ದಕ್ಕಿದ್ದಂತೆ
ತನ್ನ ಮದುವೆಯ
ಕರೆಯೋಲೆಯನ್ನ
ಟ್ಯಾಗ್ ಮಾಡಿಬಿಟ್ಟಳು...

ಪ್ರದರ್ಶನ...

ಗಣತಂತ್ರದ ಈ ದಿನ
ನೆರೆದ ದೇಶವಾಸಿಗಳೆದುರು,
ಬಂದ ಅತಿಥಿಗಳೆದುರು,
ಸಾಲು ಸಾಲಾಗಿ ಆಯಿತು
ನಮ್ಮ ಸೇನೆಯಲಿರುವ
ಶಸ್ತ್ರಾಸ್ತ್ರಗಳ ಪ್ರದರ್ಶನ;
ಅತ್ತ ಗಡಿಯತ್ತ ತಲೆಗಳೆರಡು
ಉರುಳಿ ಹೋದರೂ
ಬರಿಯ ತೋಳ್ಬಲವನೂ
ಪ್ರದರ್ಶಿಸಲು ಬಿಡಲಿಲ್ಲ,
ಇದೇ ತಾನೆ ಸರ್ಕಾರದ
ಹೇಡಿತನಕೆ ನಿದರ್ಶನ...?

ಹಿಡಿತ


ನನಗೇಕೋ ಅನ್ನಿಸಿತು, 
ಇತ್ತೀಚೆಗೆ ಆಗಿಲ್ಲ 
ನನ್ನ ಲೇಖನ ಹರಿತ
ಅದಕಾಗೇ.. 

ಹರಿತವಾದ ಲೇಖನಿಯ 
ಮೇಲಿದೆ ಈಗೆನ್ನ ಹಿಡಿತ

ಪರದಾಟ...

ರಾಜಿನಾಮೆ ಪತ್ರ
ಹಿಡಿದು ಹುಡುಕುತ್ತಿದ್ದಾರೆ
ಕೆಲ ಶಾಸಕರು
ವಿಧಾನಸಭೆಯ
ಮೂಲೆ ಮೂಲೆ ;
ಆದರೆ ನಮ್ಮ
ಸ್ಪೀಕರ್ರೋ...
ಆಡುತ್ತಿದ್ದಾರೆ
ಇವರೊಂದಿಗೆ
ಕಣ್ಣಾ ಮುಚ್ಚಾಲೆ

ಗಣತಂತ್ರ



ಭಾರತೀಯರಿಗೆಲ್ಲಾ
ಇಂದು ಗಣತಂತ್ರ
ರಾಜ್ಯದ ರಾಜಕಾರಣಿಗಳಿಗೆ
ಮಾತ್ರ ಇಂದು ಬಣತಂತ್ರ

Thursday, 24 January 2013

ಕೊಡುಗೆ...(ಚಿತ್ರಕ್ಕಾಗಿ ನಾಲ್ಕು ಸಾಲು)



 











ಕಠೋರ ಶಿಲೆಯ
ಒಳಹೊಕ್ಕು ಸಾರವ
ಹೀರುವುದಕಾಗಿಯೇ..
ಬೇರಿನ ಬಿಗಿಯಪ್ಪುಗೆ;
ಇಂತಹಾ ಪರಿಶ್ರಮಕೆ
ಕಾರಣ ಒಂದು ಬಯಕೆ,
ಭೂದೇವಿಯ ಉಡುಗೆಗೆ
ಹಸಿರು ಬಣ್ಣದ ಕೊಡುಗೆ.

ಸುಂದರ ಪ್ರಕೃತಿ...

ಪ್ರಕೃತಿಯ
ಬಗೆಗಿನ ನನ್ನ
ಸಾಲುಗಳೆಲ್ಲವೂ
ಸುಳ್ಳಿನ ಕಂತೆಯಲ್ಲ,
ಅವು ನನ್ನಯಾ
ಕಣ್ಣಿಗೆ ಕಂಡಿದ್ದು;
ಆದರೆ ನಾನನುಭವಿಸಿದ
ಆನಂದ ನಿಮಗಾಗಿರಲಿಕ್ಕಿಲ್ಲ
ಕಾರಣ, ವರ್ಣನೆಯ
ಪದಗಳೆಲ್ಲಾ ಬರಿಯ
ನನ್ನ ಅಲ್ಪಮತಿಯ
ಕೈಗಳಿಗೆ ಎಟಕಿದ್ದು.

ನೆನಪಾದ ಭಾಷಣ...



ನೋಟೀಸು ಬಂದೊಡನೆ
ಶುರುವಾಗುತಿತ್ತು ತಯಾರಿ,
ಮನೆಯವರ, ನೆರೆಹೊರೆಯವರ
ಬಳಿ ಯಾಚನೆ, ನಾನಾ ಪರಿ,
ಅದೆಷ್ಟು ಉರು ಹೊಡೆದರೂ
ಮನದೊಳಗೆ ನಿಲ್ಲದ ಗಾಬರಿ...

ಭಾಷಣದ ದಿನದಂದೂ ಕೂಡ
ಮೊದಲು ಕರೆಯುವ ಹೆಸರು
ನನ್ನದಾಗದಿರಲಿ ಎನುವ ಪ್ರಾರ್ಥನೆ
ಹೆಸರ ಕರೆದೊಡನೆ
ಹೇಳಲಾಗದ ನಡುಕ, ಒಂದೇ ಸವನೆ

ಕೆಲವೊಮ್ಮೆ ಎದುರಿಗೆ..
ಮಗದೊಮ್ಮೆ ಹಿಂಬದಿಗೆ ಕೈಯ ಕಟ್ಟಿಕೊಂಡು,
ದೇಹವನು ಮುಂದಕ್ಕೊಮ್ಮೆ
ಹಿಂದಕ್ಕೊಮ್ಮೆ ಬಾಗಿಸಿಕೊಂಡು,
ದೃಷ್ಟಿಯನು ಮೇಲ್ಛಾವಣಿಯಲಿರಿಸಿಕೊಂಡು
ಒಪ್ಪಿಸುತಿದ್ದೆ ಸಭೆಗೆ ಭಾಷಣವ
ನನ್ನೊಳಗಿನ ಭಾರವ ಇಳಿಸಿಕೊಂಡು.

ಸದಾ ನನ್ನಿಂದ ಉತ್ತಮ ಭಾಷಣವ
ನನ್ನ ನೆಚ್ಚಿನ ಅಧ್ಯಾಪಕಿಯರ
ಕಂಗಳು ಬಯಸುತಿತ್ತು..
ಆದರೆ ಸಭೆಯ ನೋಡಿದಾಗಲೆಲ್ಲಾ
ಹಿಂಬದಿಯ ಸಾಲಲ್ಲಿರುವ
ಗೆಳೆಯರ ಮುಸಿ ಮುಸಿ ನಗು
ನನ್ನೊಳಗೂ ನಗುವ ತರಿಸುತಿತ್ತು.

ಕೊನೆಗೆ ಅದಾವ ರೀತಿ ಭಾಷಣ ಬಿಗಿದರೂ
ಹೆಚ್ಚಾಗಿ ಬಹುಮಾನ ನನ್ನ ಕೈ ಸೇರುತಿತ್ತು.
ಇಂದೇಕೋ ಇವೆಲ್ಲಾ ನೆನಪಾದೊಡನೆ
ಮನವು ಮತ್ತೆ ಸಂತಸವ ಪಟ್ಟಿತ್ತು.
ಮತ್ತೊಮ್ಮೆ ಮಂದಹಾಸವು
ನನ್ನ ತುಟಿಯ ಅಪ್ಪಿಕೊಂಡಿತ್ತು.

ಕರೆ...


ನನ್ನ ಹಸಿದ ಹೊಟ್ಟೆಯ ಕೂಗು
ನಿಜಕೂ ಮೆಲ್ಲನೆ ಪಿಸುಗುಟ್ಟಿದಂತಿತ್ತು...
ಆದರೂ ಅದಾವ ರೀತಿ ಕೇಳಿಸಿಕೊಂಡಳೋ...
ಆಗಲೇ ನನ್ನಮ್ಮನಿಂದ ಊಟಕ್ಕೆ ಕರೆ ಬಂದಿತ್ತು

ಮುಂಜಾವಿನ ಕಾಯಕ..

ಬಚ್ಚಲು ಮನೆಯ ಒಲೆಯ ಬಳಿಗೋಡಿ
ತೊಡಗಿಸಿಕೊಂಡಿದ್ದೇನೆ ನನ್ನನು ನಾ
ನೀರ ಕಾಯಿಸುವ ಕಾಯಕದಲ್ಲಿ...
ಒಣ ಉರುವಲಿನ ದಹನದುರಿಗೆ ಮೈಯೊಡ್ಡಿ
ತನುವಿಗಂಟಿಕೊಂಡಿರುವ ಚಳಿಯ
ಕೊಳೆಯನು ತೊಳೆಯುವಾ ನೆಪದಲ್ಲಿ..

ಭಾಗ್ಯ...

ಮನದಾಳದೊಳಗೆ ಕುಳಿತು ಕಾಡುತಿದ್ದ
ನೋವುಗಳೆನುವ ಭಾವನೆಗಳನು
ಪದವಾಗಿಸಿ ಕಾಗದದಲಿ ಕುಳ್ಳಿರಿಸಿದ್ದೆ ;
ಆದರದನು ಜಗಕೆ ನೋಡುವ ಭಾಗ್ಯವಿಲ್ಲ...
ನನ್ನ ಕಣ್ ರೆಪ್ಪೆಯ ಗೋಡೆಯನು
ದಾಟಿ ಬಂದ ಕಣ್ಣೀರ ಹನಿಗಳು
ಆ ಪದಗಳನೆಲ್ಲಾ ತನ್ನೊಳಗೆ
ಕರಗಿಸಿ ಮಾಯವಾಗಿಸಿತಲ್ಲಾ...

Friday, 18 January 2013

ಹೊಸ ಹುರುಪು

ಆಗಸವನಾವರಿಸಿದ
ಕತ್ತಲು ಕರಗಿದಂತೆ
ನಮ್ಮೊಡಲನಾವರಿಸಿದ
ಆಲಸ್ಯವು ಕರಗುತಿರಲಿ;
ಹೊಸತನದ ನಗುವ ಬೀರಿ
ಮೇಲೇರಿ ಬಂದ ರವಿಯಂತೆ
ನಮ್ಮೊಳಗೂ ಉತ್ಸಾಹ,
ಹೊಸ ಹುರುಪು ಮೂಡಿ ಬರಲಿ.

ಯಥಾ ರಾಜಾ...

ಯಥಾ ರಾಜಾ ತಥಾ ಪ್ರಜಾ..
ನಿಜವಾದ ಮಾತಿದು...
ನಾವೆಲ್ಲಾ ಮೌನದಿಂದಿರಲು
ಕಾರಣ, ನಮ್ಮಯ ಮೌನಿ ಪ್ರಧಾನಿ.
ಇಲ್ಲವಾಗಿದ್ದಲ್ಲಿ ನಮ್ಮೊಳಗಿಂದ
ಬರಲೇ ಬೇಕಿತ್ತು....
ನಮ್ಮ ಕಾಯ್ವವರ ಶಿರಕ್ಕೆ
ಬದಲಾಗಿ... ಶತ್ರು ಶಿರ ತನ್ನಿ
ಅನ್ನುವ ಪ್ರತೀಕಾರದ ಪ್ರತಿಧ್ವನಿ

ಭಾಗ್ಯ...

ಮನದಾಳದೊಳಗೆ ಕುಳಿತು ಕಾಡುತಿದ್ದ
ನೋವುಗಳೆನುವ ಭಾವನೆಗಳನು
ಪದವಾಗಿಸಿ ಕಾಗದದಲಿ ಕುಳ್ಳಿರಿಸಿದ್ದೆ ;
ಆದರದನು ಜಗಕೆ ನೋಡುವ ಭಾಗ್ಯವಿಲ್ಲ...
ನನ್ನ ಕಣ್ ರೆಪ್ಪೆಯ ಗೋಡೆಯನು
ದಾಟಿ ಬಂದ ಕಣ್ಣೀರ ಹನಿಗಳು
ಆ ಪದಗಳನೆಲ್ಲಾ ತನ್ನೊಳಗೆ
ಕರಗಿಸಿ ಮಾಯವಾಗಿಸಿತಲ್ಲಾ...

Tuesday, 15 January 2013

ನಾಗಾಲೋಟ...

ಕೆಜೆಪಿ ಪಕ್ಷ ಕಟ್ಟಿ
ನಾಗಾಲೋಟವನು
ಶುರು ಮಾಡಿ
ಯಡಿಯೂರಪ್ಪ ಅಂದರು..
ಇನ್ನು ನಿಲ್ಲೋಲ್ಲ ನಾವೆಲ್ಲೂ...
ಮುಂದೆ ಹೋದ
ಲಕ್ಷಣವೇ ಕಾಣಿಸುತ್ತಿಲ್ಲ
ಬಹುಶ ಓಟಕ್ಕೆ
ಬಳಸಿಕೊಂಡಿರಬೇಕು
ಜಿಮ್ಮಿನ "ಟ್ರೆಡ್ ಮಿಲ್ಲು"

ಹಳೆ ವೈರಿ...

ಇರುಳರಾಜನಿಗೆ ಜೊತೆಯಾಗಿ
ನೇಸರನ ಪ್ರಜೆಗಳ ಕಾಡಲು
ಮತ್ತೆ ಬಂದಿರುವ ಈ ಚಳಿ
ರವಿಯ ಹಳೆಯ ವೈರಿ..
ಈ ಚಳಿಯ ಉಪಟಳದಿಂದಾದ
ಮೈನಡುಕವ ಇಲ್ಲವಾಗಿಸಲು
ರವಿಯ ತನುವಿಂದ ಚಿಮ್ಮಿದ
ಬಿಸಿಲ ನೆತ್ತರನು ಮೈತುಂಬಾ ಸವರಿ

ಹೊಸ ಚೇತನ

ಕಡಲಬ್ಬೆಯ ಪ್ರಸವದಿ
ಒಸರಿದ ನೆತ್ತರ
ನಡುವೆಯೆ ಕಂಡಿದೆ
ದಿನಕರನ ವದನ;
ಆಗಸದಿ ಮೊದಲ
ಅಂಬೆಗಾಲಿಟ್ಟೊಡನೆ
ಭುವಿಯ ಜೀವಿಗಳೊಳಗೆ
ಹೊಮ್ಮಿದೆ ಹೊಸ ಚೇತನ

ಹೊಸತನ

ಹೊಸತನದ ಹುಡುಕಾಟದಲಿ
ಬಗೆ ಬಗೆಯುಡುಗೆಯ ತೊಟ್ಟು
ಮತ್ತೆ ಮೂಡಿಹ ಭಾಸ್ಕರಗೆ
ಸ್ವಾಗತವ ಹಾಡಲು
ಹಕ್ಕಿಗಳು ಮಾಡಿವೆ
ಹೊಸ ರಾಗ ಸಂಯೋಜನೆ;
ಆಗಸದ ತುಂಬೆಲ್ಲ ಹರಡಿಹ
ಬಣ್ಣದೋಕುಳಿಗೆ ಪೈಪೋಟಿಯಾಗಿ
ಸಸ್ಯ ಸಂಕುಲವು ಹೊಳೆವ
ಇಬ್ಬನಿಗಳ ಹಾರವ
ಮೈತುಂಬಾ ಧರಿಸಿದಾಗ
ಮನುಜನ ಕಂಗಳಿಗೆ
ಅದ್ಭುತ ಮನರಂಜನೆ

ಹೊಳಪು

ನಿದೆರೆಯೆನುವ
ಗಾಢ ಕತ್ತಲು
ನನ್ನ ತನುವ
ಆವರಿಸಿದಾಗಲೇ
ಕನಸುಗಳೆಂಬ
ಕೋಟಿ ತಾರೆಗಳು
ಹೊಳಪ
ತೋರುವುದು.

ವಸ್ತ್ರಾಪಹರಣ



ರಾತ್ರಿಯಲಿ ಚಂದಿರನು
ತನ್ನ ಬೆಳದಿಂಗಳ
ಬೆಳಕನೆ ಬಿಳಿಯ
ಸೀರೆಯನಾಗಿಸಿ
ಪ್ರಿಯತಮೆ ವಸುಧೆಗೆ
ತೊಡಿಸಿ ಮನದಲೇ
ಪಡುತಿದ್ದ ಆನಂದ
ಬರಿಯ ಇರುಳಿಗಷ್ಟೇ ಸೀಮಿತ;
ಮುಂಜಾನೆಯಲಿ
ಮೂಡಿ ಬಂದ ನೇಸರನು
ಅಪಹಾಸ್ಯ ಮಾಡತೊಡಗಿದ
ಮುಗಿಲ ಚಂದಿರನಿಗೆ,
ಬೆಳಕ ಕಿರಣಗಳೆನುವ
ತನ್ನ ಸಹಸ್ರ ಕೈಗಳಿಂದ
ಭುವಿಯ ಮೇಲಿನ
ಆ ಮಂಜಿನ ಸೀರೆಯ
ಎಳೆದು ಇಲ್ಲವಾಗಿಸುತ.

ಪುನರ್ಜನ್ಮ

ಅಳುವನೆಲ್ಲಾ ಅಳಿಸಿಹಾಕಿ
ಸೊಗಸಾದ ನಗುವೊಂದನು
ಎಲ್ಲರ ಮುಖದಲ್ಲಿ ಮೂಡಿಸಿದ್ದಾರೆ.
ನಮ್ಮನಗಲಿ ಬಲುದೂರ ಹೋಗಿ
ಇರಲು ಮನಸಾಗದೇ
ಮತ್ತೆ ನಮ್ಮ ಜೊತೆಗೂಡಿದ್ದಾರೆ.
ನಮ್ಮ ನೋವನಿಲ್ಲವಾಗಿಸುವುದಕಾಗಿ
ನನ್ನಪ್ಪ, ನನ್ನಕ್ಕನಾ ಗರ್ಭದಿಂದಲಿ
ಹೆಣ್ಣು ಮಗುವಾಗಿ ಹುಟ್ಟಿ ಬಂದಿದ್ದಾರೆ.

ಹೂನಗೆ...

ನಿರಂತರವಾಗಿ
ಕಣ್ಣೀರಧಾರೆಯೆರೆದು
ನಗುವಿನ ಗಿಡವ
ಬೆಳೆಸುತಿದ್ದರೂ
ಚೆಲುವಾದ
ಹೂವೊಂದು
ಅರಳುವ
ಲಕ್ಷಣವೇ ಇಲ್ಲ.

ಅಂದು-ಇಂದು



ಇಬ್ಬನಿಯೆಂದರೆ
ಉದಯ ರವಿಗೆ
ಪ್ರಕೃತಿಯು ಕೊಡುವ
ಮುತ್ತುರತ್ನಗಳ ರಾಶಿ
ಎಂದು, ಹಿಂದೊಮ್ಮೆ ಹೇಳಿದ್ದೆ.
ಆದರೆ ಇಂದೇಕೋ ನನಗೆ
ಕತ್ತಲ ಗಾಡಾಂಧಕಾರದಲಿ
ತರುಲತೆಗಳು ಅತ್ತು
ಸುರಿಸಿದ ಕಣ್ಣೀರ
ಹನಿಯಂತೆ ಕಾಣಿಸುತಿದೆ

ಹೊಸ ವರುಷ...????



ಅವರಿವರೆಲ್ಲಾ
ನಗು ನಗುತಾ
ಹೇಳಿದರು..
"ಹೊಸ ವರುಷದ
ಶುಭಾಶಯಗಳು.."
ನಾನೊಮ್ಮೆ ಸುತ್ತಲೂ
ಕಣ್ಣಾಡಿಸಿ ಕೇಳಿದೆ
ಹೊಸತೇನು..???
ಈಗ ಗೊಂದಲವು
ಅವರ ಮುಖದ
ನಗುವ ಕಸಿದುಬಿಟ್ಟಿದೆ.
ಉತ್ತರದ ಹುಡುಕಾಟ
ಇನ್ನೂ ಜಾರಿಯಲ್ಲಿದೆ.

ರಹಸ್ಯ..

ರವಿಯು ಆಗಸದ ಪೂರ್ತಿ
ತನ್ನವಳ ಹಗಲಿಡೀ ಹುಡುಕಾಡಿ
ಸಿಗದೆ ಹೋದಾಗ ನಿರಾಶನಾಗಿ
ಸಂಜೆಯಲಿ ಕಡಲ ಮರೆಗೋಡಿ
ಮನಸಾರೆ ಅತ್ತಿರಲೇಬೇಕು,
ಕತ್ತಲೆಡೆಯಲ್ಲಿ ಅತ್ತಿದ್ದು
ಲೋಕದ ಕಣ್ಣಿಗೆ ಕಾಣಿಸಲಿಲ್ಲವೆಂದು
ಮನದೊಳಗೆ ತನ್ನ ತಾ
ಸಂತೈಸಿಕೊಂಡಿದ್ದಿರಬೇಕು,
ಆದರೆ ಹಾಳು ಕಡಲ ನೀರು
ತನ್ನ ಬಳಿ ಬಂದವರಿಗೆಲ್ಲಾ
ಕಣ್ಣೀರ ರುಚಿಯನು ಉಣಬಡಿಸಿ
ರವಿಯ ಅಳುವಿನ
ರಹಸ್ಯವ ಬಯಲುಗೊಳಿಸಿತ್ತು

Wednesday, 2 January 2013

ಸತಾಯಿಸು

ಕಣ್ಣೀರ ಕಡಲ
ದಾಟುವುದಕಾಗಿ
ನಿರಂತರ ಈಜು
ಸಾಗುತಲೇ ಇದೆ;
ಕೈಗೆಟುಕದಷ್ಟು
ದೂರದಲಿ ನಿಂತ
ನಗುವಿನ ದಡವೀಗ
ನಗುತ ನನ್ನ
ಸತಾಯಿಸುತಿದೆ.

ಪತನ

ಪತನವಾಗಿದೆ
ನನ್ನ ಮುಖದ
ಸಾಮ್ರಾಜ್ಯದಲಿ
ನಗುವಿನಾಳಿಕೆ,
ಇದೀಗ ಶುರು
ಅಳುವಿನಾಡಳಿತ
ಇದೆಲ್ಲದಕೆ ಕಾರಣ
ನನ್ನಾಪ್ತರ ಅಗಲಿಕೆ

ಹೊಸ ವರುಷ...????

ಅವರಿವರೆಲ್ಲಾ
ನಗು ನಗುತಾ
ಹೇಳಿದರು..
"ಹೊಸ ವರುಷದ
ಶುಭಾಶಯಗಳು.."
ನಾನೊಮ್ಮೆ ಸುತ್ತಲೂ
ಕಣ್ಣಾಡಿಸಿ ಕೇಳಿದೆ
ಹೊಸತೇನು..???
ಈಗ ಗೊಂದಲವು
ಅವರ ಮುಖದ
ನಗುವ ಕಸಿದುಬಿಟ್ಟಿದೆ.
ಉತ್ತರದ ಹುಡುಕಾಟ
ಇನ್ನೂ ಜಾರಿಯಲ್ಲಿದೆ.

ಸಾವು ತಂದಿಟ್ಟ ನೋವು..

ನನ್ನಪ್ಪನ ನನ್ನಿಂದ ಕಸಿದುಕೊಂಡಾತನಿಗೆ ಕಂಗಳು ಕಾಣಿಸುವುದೇ ಇಲ್ಲ
ಕುಸಿದು ಕುಳಿತ ಕುಟುಂಬದ ಕಣ್ಣೀರ ಕೋಡಿಯೂ ಕಾಣದಾಯಿತಲ್ಲ..

ಚಿಕ್ಕಪ್ಪನ ಅಗಲಿಕೆಯ ಗಾಯ ಹಸಿಹಸಿಯಾಗಿರುವುದು ಕಾಣಿಸಲೇ ಇಲ್ಲ
ಆ ಗಾಯದ ಮೇಲೇ ಬರೆಯೆಳೆದು ಬಿಟ್ಟ, ಅದರಿಂದಾದ ನೋವು ಸಹಿಸಲಾಗುತ್ತಿಲ್ಲ

ನನಗಿರುವುದು ಬರಿಯ ಎರಡೇ ಕೈಗಳು ಎನುವುದು ಕಾಣಿಸಲೇ ಇಲ್ಲ
ಹಲವು ಕಂಗಳ ಅಳಿಸಿಬಿಟ್ಟ, ಅವೆಲ್ಲವನೂ ಒರೆಸುವುದು ನನಗೆ ಸಾಧ್ಯವಾಗುತ್ತಿಲ್ಲ

ನನ್ನ ಕಣ್ಣಿನಲೂ ಅಶ್ರು ಸಾಗರವಿರುವುದು ಅವನಿಗೆ ಕಾಣಿಸಲೇ ಇಲ್ಲ
ಅವನೆಲ್ಲಾ ಬಂಧನದಲ್ಲಿರಿಸೆಂದು ಬಿಟ್ಟ, ಕಾರಣ ನನ್ನವರ ನಾ ಸಂತೈಸಬೇಕಲ್ಲಾ.

ನನ್ನ ಕಾಲ ಮೇಲೆ ನಾ ನಿಂತಿದ್ದರೂ ಹೆಗಲಿನ್ನೂ ಹಸಿಯಾಗಿರುವುದು ಕಾಣಿಸಲೇ ಇಲ್ಲ
ಕುಟುಂಬದ ಹೊಣೆಯ ಮಣ ಭಾರವ ಹೊರಿಸಿಯೇ ಬಿಟ್ಟ, ಅದನೀಗ ಹೊರದೆ ನನಗೆ ಬೇರೆ ವಿಧಿಯಿಲ್ಲ

ನನ್ನಪ್ಪ ನಿನಗೂ ಬಲು ಅಚ್ಚುಮೆಚ್ಚೆಂದು ನಿನ್ನ ಬಳಿ ಕರೆಸಿಕೊಂಡೆ, ತಡೆಯುವುದು ನನ್ನಿಂದ ಸಾಧ್ಯವಿಲ್ಲ
ಅವರ ಸವಿನೆನಪುಗಳೆನೇ ನಮ್ಮುಸಿರನಾಗಿಸಿಬಿಡು ಹೇ ದೇವ, ಇದ ಬಿಟ್ಟು ನಿನ್ನ ಬೇರೇನೂ ನಾ ಕೇಳುವುದಿಲ್ಲ.

ಕೆಂಪು ವದನ



ಇರುಳು ಪೂರ್ತಿ
ವಸುಧೆಯ
ನೋಡಲಾಗದುದರ
ಹತಾಶೆಯನು
ಪ್ರತಿಬಿಂಬಿಸುವುದೇ
ಮುಂಜಾವಿನ
ನೇಸರನ ಈ
ಕೆಂಪು ವದನ.
ಕಂಡೊಡನೆ
ಹತಾಶೆಯ
ಬಣ್ಣವನು
ಕಿತ್ತೊಗೆದು
ಬಿಳಿ ಬಣ್ಣದ
ನಗುವ ಧರಿಸಿ
ಸೇರುವನು
ಆಗಸದ ಸದನ