ಈ ದಟ್ಟವಾದ ಕರಿಮೋಡ
ಬರಿಯ ಮಳೆಹನಿಯ ಸುರಿಸುವುದಲ್ಲ
ನೆನಪುಗಳನೂ ಉಕ್ಕೇರಿಸುತ್ತದೆ...
ನನಗಿನ್ನೂ ನೆನಪಿದೆ....
ಬಾಲ್ಯದ ಮಳೆಗಾಲದ ಆ ದಿನಗಳು...
ಹೊಸದಾಗಿ ತೆಗೆದುಕೊಂಡಿದ್ದ
ನೋಟು ಬುಕ್ಕಿನ ನಡುಹಾಳೆಯದು,
ದೋಣಿಯಾಗಿ ಮನೆಯೆದುರಿನ
ನೀರ ಹರಿವಿನಲಿ ತೇಲಿ ಹೋಗುತ್ತಿತ್ತು...
ಮನೆಯ ಛಾವಣಿಯಿಂದ ಕೆಳಗೆ
ಧುಮ್ಮುಕ್ಕುತಿದ್ದ ಹನಿಗಳೆಲ್ಲವೂ
ನನ್ನಂಗೈಯ ರಂಗಮಂಟಪದಲಿ
ಕುಣಿದು ಕುಪ್ಪಳಿಸುತ್ತಿತ್ತು....
ಸಾಲುಸಾಲಾಗಿ ಶಾಲೆಗೆ ಸಾಗುವಾಗ
ಗೆಳೆಯರ ಕೊಡೆಗಳದು
ಬೀಸುಗಾಳಿಗೆ ತೆಪ್ಪವಾದಾಗ
ನಗೆಯ ಬುಗ್ಗೆಯದು ಪುಟಿದೇಳುತಿತ್ತು..
ರೋಡಿನಲಿ ನಿಂತ ನೀರಿನ ಮೇಲೆಯೇ
ನಾನನ್ನ ಬರಿಯ ಸೈಕಲ್ ಟಯರನು
ವೇಗದಲಿ ಓಡಿಸಿದಾಗ, ಮೇಲಕ್ಕೆ
ಚಿಮ್ಮುತ್ತಿದ್ದ ಸಾಲು ನೀರಬಿಂದುಗಳು
ನನ್ನ ರೋಮಾಂಚನಗೊಳಿಸುತಿತ್ತು...
ಒದ್ದೆ ಬಟ್ಟೆಯ ವಾಸನೆ,
ಒಲೆಯ ಬುಡದಲಿ ಬಿಡಿಸಿಟ್ಟ ಒದ್ದೆ ಪುಸ್ತಕ
ನೆನೆದ ಕೂದಲನು ಒಣ ಬೈರಾಸಿನಿಂದ
ತಿಕ್ಕಿ ಒರೆಸುತ್ತಿದ್ದ ಅಮ್ಮನ ಕಾಳಜಿ...
ಹೀಗೆಯೇ ಈ ಮಳೆಗಾಲದಲ್ಲಿ
ಮನದ ಬುವಿಯಲ್ಲೂ ಬಿಡದ
ನೆನಪಿನ ಜಡಿಮಳೆ...