ಎಟುಕದಷ್ಟು ಎತ್ತರದಲಿಹ ಹೊಳೆವ ನಿನ್ನ ಬಿಳಿಯ ತನುವಿಗೆ, ಬಗೆ ಬಗೆಯ ರಂಗನೆರಚಿ ಹೋಳಿಯಾಡುವಾಸೆ.. ನನ್ನಾಸೆಯ ಕಂಗಳ ಈ ಹಸಿವ ನೀಗಿಸೆ... ಕೊಡುವೆಯಾ ಚಂದಿರನೆ ಕೆಳಗಿಳಿದು ಬರುವ ಒಂದು ಸಣ್ಣ ಭರವಸೆ..
ಹೋಳಿ
ಹಗಲಿನಲಿ ಬಣ್ಣ ಹಚ್ಚಿಸಿಕೊಳುವುದರಿಂದ ತಪ್ಪಿಸಿಕೊಂಡರೂ, ಕಡಲ ಗೂಡ ಸೇರುವ ಹೊತ್ತಲಿ ಬಾನಾಡಿಗಳು ನೇಸರಗೆ ಕೆಂಬಣ್ಣವ ಎರಚಿಯೇ ಬಿಟ್ಟವಲ್ಲ
ಈ ಕತ್ತಲೆಯೇ ಹಾಗೆ ಕಣ್ಣ ಮುಚ್ಚಿಡುವಂತೆಯೇ ಪ್ರೇರೇಪಿಸುವ ಭೀಕರತೆಯ ನಮ್ಮೆದುರು ತಂದೊಡ್ಡುವುದು; ಅದಕಂಜದೆ ಕತ್ತನೆತ್ತುಬೇಕು.. ಆಗ ಮಾತ್ರ, ಬಾನ ರಂಗಮಂಟಪದ ಕೋಟಿ ತಾರೆಗಳ ಹೊಳೆವ ನಾಟ್ಯದ ದೃಶ್ಯ-ವೈಭವ ನಮಗೆ ಕಾಣಿಸುವುದು
ಅವಳ ನೆನಪೆನುವ ನೇಸರ ಏಕಾಂತದ ಸಂಜೆಯಲಿ ನನ್ನ ಕಣ್ಣಿನ ಕಡಲೊಳಗೆ ಇಳಿಯುತಿರಲು ರಾಶಿ ಕಣ್ಣೀರ ಅಲೆಗಳು ಅದೇಕೋ ಚಡಪಡಿಸುತಿದೆ, ಸಮಯ ಕಳೆದಂತೆಲ್ಲಾ ಇಡಿಯ ಕಣ್ ಕಡಲು ಮೆಲ್ಲಮೆಲ್ಲನೆ ನೆತ್ತರ ಬಣ್ಣವ ತಾ ಪಡೆಯುತಿದೆ
ಆಳೆತ್ತರದ ನಾಲಕ್ಕು ಚಕ್ರಗಳು... ಅದಕೆ ಹೊಂದಿಕೊಂಡಿರುವಂತಿರುವ ಪೀಠ.. ಆ ಪೀಠದ ಸುತ್ತ ಕೆತ್ತಲ್ಪಟ್ಟಿರುವ ಹಳೆಯ ಶಿಲ್ಪ ವೈಭವ.. ಮತ್ತಷ್ಟು ಮೆರುಗು ತರಲೆಂದು ಅದಕೆ ಬಗೆ ಬಗೆಯ ಹೂಮಾಲೆಯಾಲಂಕಾರ ಮತ್ತೆ ಮೇಲಕ್ಕೆ ನಿಲ್ಲಿಸಿರುವ ದೇವತೆಗಳ ಬಣ್ಣದ ಚಿತ್ರಪಟ.. ನಟ್ಟ ನಡುವೆ ಸಣ್ಣ ಪೀಠದ ಮೇಲೆ ಗಾಂಭೀರ್ಯದಲಿ ಕುಳಿತು ರಾರಾಜಿಸುತಿರುವ ಬಲಿಮೂರ್ತಿ.. ಮತ್ತೆ ಮೇಲೆ ಮೇಲಕ್ಕೆ ಗೋಲಾಕಾರದಲಿ ಜೋಡಿಸಲ್ಪಟ್ಟ ಸಣ್ಣ ಸಣ್ಣ ಕೆಂಪು ಬಿಳಿಯ ಬಾವುಟಗಳು ಅದರ ತುದಿಯಲಿ ನಿಂತಿರುವ ಬಟ್ಟೆಯಿಂದಾದ ಕಲಶ.. ಆ ಕಲಶಕೆ ನೆರಳನೀಯುವಂತಿರುವ ತುತ್ತತುದಿಯ ಛತ್ರಿ... ಇಡಿಯ ತೇರಿನಂದವ ಹೆಚ್ಚಿಸುವ ಬದಿಯ ಎರಡು ಬಾವುಟಗಳು.. ಅಹಾ ಅದೆಂತಾ ಸೊಬಗು, ನನ್ನೂರ ತೇರಿನದು. ಜಯ ಘೋಶದಲಿ ಈ ರಥವ ಮೆಲ್ಲ ಮೆಲ್ಲನೆ ಎಳೆದರೆ ಸಾಕು ಧನ್ಯತೆಯ ಭಾವವೊಂದು ತೇರನೆಳೆದವರ ಆವರಿಸುವುದು...
ಏಕಾಂತದಲಿ ಬೀಸಿ ಬಂದ ಅವಳ ನೆನಪೆನುವ ತಂಗಾಳಿಗೆ ನನ್ನೊಳಗಿನ ಪದಗಳ ತೋಟದಲಿನ ಎಟುಕದ ಚೆಲುವಿನ ಹೂವುಗಳೆಲ್ಲಾ ಉದುರಿ ಬಿತ್ತು, ನನ್ನ ಕೈ ಮೇಲೆ; ಭಾವನೆಯ ದಾರದಲಿ ಹಾಗೆಯೇ ಕುಳಿತು ಪೋಣಿಸಿ ಮುಗಿಸಿದಾಗ ಆಯಿತೊಂದು ಕವಿತೆಯೆನುವ ಸುಂದರ ಹೂ ಮಾಲೆ.
ಶಿಲ್ಪಿಯ ಉಳಿಯ ಪೆಟ್ಟಿನ ನೋವ ಸಹಿಸಲಾರದೆ ಅವನ ಶಪಿಸತೊಡಗಿದ ಶಿಲೆಗೆ ಮೂರ್ತಿಯಾಗಿ ಬದಲಾಗಿ ಅದ್ಭುತವೆಂದು ನೋಡುಗರ ಬಾಯಲ್ಲಿ ಹೊಗಳಿಸಿಕೊಂಡಾಗ, ಪಾಪ ಪ್ರಜ್ಞೆ ಕಾಡತೊಡಗಿತಂತೆ, ಆದರೆ ಅದೇ ಹೊತ್ತಿಗೆ ಅಲ್ಲೆಲ್ಲೋ ಇನ್ನೊಂದು ಶಿಲೆ ಅದೇ ಶಿಲ್ಪಿಯ ಪ್ರತಿ ಏಟಿಗೆ ಮನಸಿನೊಳಗೇ ಶಪಿಸುತ್ತಿತ್ತಂತೆ