ಕೊರಳ ಸುತ್ತಿಕೊಂಡ ಹುರಿಹಗ್ಗವದು ಹಿಸುಕಿ ಉಸಿರ ಮೆಲ್ಲಮೆಲ್ಲನೆ ನಿಲ್ಲಿಸುತ್ತಿದ್ದರೂ... ತಾಯಿ ಭಾರತಿಯ ಭಕ್ತಿ ಗೀತೆಯ ಸ್ಪೂರ್ತಿಯ ಶ್ರುತಿಯನು ತಪ್ಪಲು ಬಿಡಲೇ ಇಲ್ಲ.... ತಾ ಹಾಡುವುದ ನಿಲ್ಲಿಸಿದರೂ, ದೇಶಭಕ್ತಿಯ ಕ್ರಾಂತಿ ಸಂಗೀತದ ಪಾಠವನು ಭರತ ಕುವರರಿಗೆ ಹೇಳಿಕೊಟ್ಟ ಭಗತನಿಗೆ ನಮಿಸದಿದ್ದರೆ, ಈ ಸ್ವಾತಂತ್ರ್ಯದ ರುಚಿಯನನುಭವಿಸಲು ನಮಗೆ ಯೋಗ್ಯತೆಯೇ ಇಲ್ಲ..
ಸುಖಗಳದ್ದೊಂದು ತುದಿ ದುಃಖಗಳದೊಂದು ತುದಿ ಅತ್ತಲಿಂದಿತ್ತ ,ಇತ್ತಲಿಂದತ್ತ ತೂಗುವವ ಪರಮಾತ್ಮ ಆ ತುದಿಯಲಿದ್ದಾಗ ನಕ್ಕು ಈ ತುದಿಗೆ ಬಂದಾಗ ಅತ್ತು ತೂಗಾಡುವುದೇ ಜೀವನ ತೂಗುವುದದು ನಿಂತು ನಡುವೆ ಸುಮ್ಮನಾಗುವುದೇ ಮರಣ
ತನ್ನಾರಾಧನೆಗೆ ಹೂ ತುಳಸಿಯದು ಬೇಕೇ ಬೇಕು ಅನ್ನುತ್ತಾ... ಮುಂಜಾವಿನಲಿ ಹೂತೋಟಕೆ ಕಳುಹಿಸಿ, ಇಬ್ಬನಿಗಳ ತಣ್ಣನೆಯ ಸ್ಪರ್ಶ ಕೊಡಿಸಿದ, ಹೂ ಚಿಪ್ಪಿನೊಳಗಣ ನೀರ ಮುತ್ತುಗಳ ತೋರಿಸಿ ಮನಕಾಹ್ಲಾದ ನೀಡಿದ, ತುಳಸಿ ತುದಿಯ ಕಿತ್ತು ತರಲು ಪರಿಶುದ್ಧ ಗಾಳಿಯ ಶ್ವಾಸಕೋಶದೊಳಗಿಳಿಸಿ ಆರೋಗ್ಯ ಭಾಗ್ಯವನು, ಆರಾಧನೆಯ ಮೊದಲೇ ದಯಪಾಲಿಸಿದ ಆ ಭಗವಂತನಿಗಿದೋ ನನ್ನ ಮುಂಜಾವಿನ ಅನಂತ ನಮನ