ನನ್ನಕ್ಕನ ಮದುವೆಯ ದಿನ ನಿಶ್ಚಯವಾದಂದಿನಿಂದ ಅದೇನೋ ಸಡಗರವಿತ್ತು,
ಪ್ರತಿಯೊಂದು ತಯಾರಿಗಳ ಒದ್ದಾಟ, ಓಡಾಟದಲೂ ಅದೇನೋ ಸಂಭ್ರಮವಿತ್ತು,
ಮದುವೆಯ ದಿನದ ಪ್ರತಿಯೊಂದು ಸಂಪ್ರದಾಯವನು ಆಸ್ವಾದಿಸಿದರೂ...
ಕೊನೆಯಲ್ಲಿ ನನ್ನಕ್ಕನ ಕಳುಹಿಸಿ ಕೊಡುವ ಸಮಯವಾದಾಗ
ಅದುವರೆಗಿನ ನಮ್ಮವರೆಲ್ಲರ ಸಡಗರ ಮಾಯವಾಗಿದ್ದು ಯಾಕೆ..?
ಬಂದಿದ್ದ ನೆಂಟರಿಷ್ಟರೆಲ್ಲರೊಂದಿಗೆ ದಿಬ್ಬಣದ ಪ್ರಯಾಣವೂ ಖುಷಿ ತಂದಿತ್ತು,
ವರನ ಕಡೆಯವರೆಲ್ಲರನು ಉಪಚರಿಸುವಾಗಲು ಮನವು ಆನಂದಲಿತ್ತು,
ಸಂತಸದಲೇ ಭಾವನವರ ಕಾಲನು ನಾ ತೊಳೆದರೂ...
ಕೊನೆಯಲ್ಲಿ ನನ್ನಕ್ಕನ ಅವರ ಬಳಿಗೇ ಕಳುಹಿಸಲು ಮುಂದಾದಾಗ
ಅದುವರೆಗಿನ ನನ್ನಲ್ಲಿನ ಆನಂದ ಮರೆಯಾಗಿದ್ದು ಯಾಕೆ..?
ಮದುಮಗಳಾಗಿ ನನ್ನಕ್ಕ ಮಂಟಪಕೆ ಬರುತಿರಲು ಅವಳ ತುಟಿಯಲ್ಲಿ ನಗುವಿತ್ತು,
ಗಟ್ಟಿಮೇಳದ ನಾದದೊಂದಿಗೆ ಹಾರವ ಬದಲಾಯಿಸುವಾಗ ಸಣ್ಣದೊಂದು ನಡುಕವಿತ್ತು
ತಾಳಿಯನು ಕಟ್ಟಿದ ಪತಿಯಿಂದ ಓಕುಳಿಯಾಟದಲಿ ಸೋತು ಹೋದರೂ..
ನಗುತಲೇ ಇದ್ದ ನನ್ನಕ್ಕ, ಕೊನೆಯಲ್ಲಿ ಅತ್ತ ಹೊರಡಲನುವಾದಾಗ,
ಅದುವರೆಗೆ ಸಂಭ್ರಮದ ಮಿಂಚಿದ್ದ ಅವಳ ಕಣ್ಣಲ್ಲಿ, ಕಣ್ಣೀರ ಧಾರೆ ಸುರಿದದ್ದು ಯಾಕೆ..?
ಅಚ್ಚುಕಟ್ಟಾಗಿ ಮದುವೆಯು ನಡೆದುದರ ತೃಪ್ತಿ ನನ್ನ ಮನಸಲ್ಲಿತ್ತು
ಬಂದ ಬಂಧು ಮಿತ್ರರನೆಲ್ಲ ಸರಿಯಾಗಿ ಉಪಚರಿಸಿದ ಸಂತೋಷವಿತ್ತು,
ತಮ್ಮನಾದರೇನಂತೆ ಗಂಡು ನಾನಾದ್ದರಿಂದ ಕಣ್ ರೆಪ್ಪೆಯ ಕದವ ಮುಚ್ಚಿದ್ದರೂ..
ಕೊನೆಯಲ್ಲಿ ಅಳುಮೊಗದಿ ಅಪ್ಪ ಅಮ್ಮ .. ನನ್ನಕ್ಕನ ದಾನ ಮಾಡಿದಾಗ
ಮುಚ್ಚಿದ್ದ ಕಣ್ ರೆಪ್ಪೆಯ ಸಂದಿನಿಂದ ಒಂದೆರಡು ಕಣ್ಣೀರ ಹನಿಗಳು ಹೊರ ಬಂದಿದ್ದು ಯಾಕೆ..?