ಮತ್ತೆ ಬಂದಿದೆ ಸ್ವಾತಂತ್ರ್ಯ ದಿನ..
ತಾಯಿ ಭಾರತಿಯ ಕೈ ಕೋಳ ಕಳಚಿದಾ ದಿನ...
ಅಂದಿದ್ದ ಹೋರಾಟಗಾರರ ಧಮನಿಯಲಿ ಹರಿಯುತಿದ್ದ
ನೆತ್ತರ ಪ್ರತಿ ಹನಿಯೂ ಜಪಿಸುತ್ತಿದ್ದುದು ಒಂದೇ ಮಂತ್ರ
ತಾಯಿ ಭಾರತಿಯ ಬಂಧಿಸಿಹ ಬಿಳಿಯರೆದೆಬಗೆದು
ದಾಸ್ಯದ ಕತ್ತಹಿಚುಕಿ ನಾವಾಗಬೇಕು ಸರ್ವ ಸ್ವತಂತ್ರ
ಗಳಿಸಿದರು, ಬಿಡುಗಡೆಗೊಳಿಸಿದರು ಭಾರತಾಂಬೆಯ
ಅದೆಷ್ಟೋ ವರುಷಗಳ ಹೋರಾಟದ ಫಲದಿಂದ
ತಾಯ್ನಾಡ ಬಿಗಿದಿಟ್ಟಿದ್ದ ಗುಲಾಮಗಿರಿಯ ಕೋಳವದು ಕರಗಿತು
ಹುತಾತ್ಮರಾದವರ ಪ್ರಾಣ ಜ್ಯೋತಿಯ ಉರಿ ಶಾಖದಿಂದ
ತಂತಮ್ಮ ಪ್ರಾಣಗಳನಡವಿಟ್ಟು ಗಳಿಸಿದರು ಸ್ವಾತಂತ್ರ್ಯವ
ಅಂದಿನ ದೇಶಪ್ರೇಮಿಗಳು ಭವ್ಯ ಭಾರತದ ಕನಸ ಹೊತ್ತು.
ಕಳೆದುಕೊಂಡಿದ್ದ " ವಿಶ್ವಗುರು " ಪೀಠವನು ಮತ್ತೆ ತನ್ನಯ
ಸಂಸ್ಕೃತಿಯ ಬಲದಿ ಗಳಿಸಬೇಕೆನುವುದವರ ಆಸೆಯಾಗಿತ್ತು.
ಆದರಿದೆಂಥಾ ದೌರ್ಭಾಗ್ಯ.. ನಮ್ಮತನವನೆಲ್ಲಾ ಮಣ್ಣೊಳಗೆ ಹೂತಿಟ್ಟು
ತಾವಾಗೇ ಬಯಸುತ್ತಿದ್ದಾರೆ ಭಾರತೀಯರು ವಿದೇಶಿ ಸಂಸ್ಕೃತಿಯ ದಾಸ್ಯ.
ಅಂದು ಜಗದ ಶ್ರೇಷ್ಠ ಸಂಸ್ಕೃತಿಯನುಳಿಸಿ, ಬೆಳೆಸುವ ಸಲುವಾಗಿ
ಚಿಂತಿಸದೆ ತಮ್ಮಳಿವ ಸ್ವಾಗತಿಸಿದವರಿಗೆಲ್ಲಾ, ಮಾಡಿದಂತಾಗಲಿಲ್ಲವೇ ನಾವು ಅಪಹಾಸ್ಯ.
ಸಮಯವಿನ್ನೂ ಮೀರಿಲ್ಲ, ಮತ್ತೆ ಕಟ್ಟ ಬಹುದು ನಾವು ಭವ್ಯ ಭಾರತವ
ಪಣ ತೊಟ್ಟು ನಮ್ಮ ಸಂಸ್ಕೃತಿಯ ಉಳಿಯುವಿಕೆಗಾಗಿ ಮಾಡಬೇಕು ಒಂದಿಷ್ಟು ಹೋರಾಟ
ಹೊತ್ತಿರುವ ತಾಯ್ನೆಲದ ಋಣ ಭಾರದರಿವನೆ ನಮ್ಮ ಉಸಿರನಾಗಿಸಿ
ಹೃದಯದಲೊಂದು ದೇಶನಿಷ್ಠೆಯ ಗೂಟವನು ನೆಟ್ಟು, ಹಾರಿಸಿದರಾಯಿತು ದೇಶಪ್ರೇಮದ ಬಾವುಟ.
No comments:
Post a Comment